ದೃಢೀಕರಣ ಪತ್ರ ನೀಡಲು 1,500 ರೂ. ಲಂಚದ ಬೇಡಿಕೆ: ಉಪ ತಹಶೀಲ್ದಾರ್ ಸುಧಾ ಲೋಕಾಯುಕ್ತ ಬಲೆಗೆ
ಚನ್ನಗಿರಿ: ಟ್ರ್ಯಾಕ್ಟರ್ ಖರೀದಿಗೆ ದೃಢೀಕರಣ (ಬೋನಾಪೈಡ್) ಪತ್ರ ನೀಡಲು ₹ 1,500 ಲಂಚ ಪಡೆಯುತ್ತಿದ್ದ ತಾಲ್ಲೂಕಿನ ದೇವರಹಳ್ಳಿ ನಾಡಕಚೇರಿಯ ಉಪ ತಹಶೀಲ್ದಾರ್ ಸುಧಾ ಮೂಡಲಗಿರಿಯಪ್ಪ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಲಂಚದ ಹಣವನ್ನು ಜಪ್ತಿ ಮಾಡಿದ ಪೊಲೀಸರು ಸುಧಾ ಅವರನ್ನು ಬಂಧಿಸಿದ್ದಾರೆ. ಚನ್ನಗಿರಿ ತಾಲ್ಲೂಕಿನ ಹಿರೇಗಂಗೂರು ಗ್ರಾಮದ ರೈತ ಎಸ್.ಆರ್.ಕುಮಾರ್ ಟ್ರಾಕ್ಟರ್ ಖರೀದಿಗೆ ದೃಢೀಕರಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಪತ್ರದ ಹಸ್ತಾಂತರಕ್ಕೆ ಸುಧಾ ₹ 2,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ ₹ 500 ಪಡೆದುಕೊಂಡಿದ್ದರು ಎಂದು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್.ಕೌಲಾಪುರೆ ತಿಳಿಸಿದ್ದಾರೆ.
ಲಂಚ ನೀಡಲು ಇಷ್ಟವಿಲ್ಲದ ಕುಮಾರ್, ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಮಂಗಳವಾರ ಲಂಚದ ಉಳಿದ ಹಣವನ್ನು ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಇನ್‌ಸ್ಪೆಕ್ಟರ್ ಸಿ.ಮಧುಸೂದನ್ ಹಾಗೂ ಪಿ.ಸರಳ ನೇತೃತ್ವದ ತಂಡ ದಾಳಿ ನಡೆಸಿತು ಎಂದು ಮಾಹಿತಿ ನೀಡಿದ್ದಾರೆ.





