ಮಂಗಳೂರು: ಕರಾವಳಿ ಭಾಗದಲ್ಲಿ ಇಂದಿನಿಂದ ನಾಲ್ಕೈದು ದಿನಗಳ ಕಾಲ ಭಾರೀ ಮಳೆ ಸಾಧ್ಯತೆ
ಮಂಗಳೂರು: ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಇಂದಿನಿಂದ ನಾಲ್ಕೈದು ದಿನಗಳ ಕಾಲ ಭಾರಿ ಮಳೆ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅ.16 ರಿಂದ 19 ರ ವರೆಗೆ ವಾಯುಭಾರ ಕುಸಿತವಾಗಿ ಭಾರಿ ಮಳೆ ಹಾಗೂ ಸಮುದ್ರ ಅಲೆಗಳ ಅಬ್ಬರ ಹೆಚ್ಚಳವಾಗುವ ಸಾಧ್ಯತೆಯಿದೆ. ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.
ತುಸು ಕಾಲ ಸುಮ್ಮನಿದ್ದ ವರುಣ ಮತ್ತೆ ತನ್ನ ಆರ್ಭಟ ಶುರು ಮಾಡಿದ್ದಾನೆ. ರಾಜ್ಯದ ಬಹುತೇಕ ಕಡೆ ಮಳೆಯಾಗುತ್ತಿದೆ. ಸತತ 18 ತಾಸು ಸುರಿದ ಮಳೆಗೆ ರಾಜ್ಯ ರಾಜಧಾನಿ ಬೆಂಗಳೂರು ತತ್ತರಿಸಿದೆ. ರಸ್ತೆಗಳು ನದಿಯಂತಾಗಿದೆ. ಉಷ್ಣಾಂಶ 6 ಡಿಗ್ರಿ ಕುಸಿತ ಕಂಡಿದೆ.
ಮನೆಗಳಿಗೆ ನೀರು ನುಗ್ಗಿದೆ.
ಇನ್ನೊಂದು ಕಡೆಯಲ್ಲಿ ಕರಾವಳಿಯಲ್ಲಿ ಕಳೆದ ಎರಡು ದಿನಗಳಿಂದ ಸಾಧಾರಣ ಮಳೆಯಾಗುತ್ತಿದ್ದು, ಮುಂದಿನ ನಾಲ್ಕೈದು ದಿನಗಳ ಕಾಲ ಭಾರಿ ಮಳೆ ಸಾಧ್ಯತೆಯಿದೆ. ಭಾರತೀಯ ಹವಾಮಾನ ಇಲಾಖೆ ವಾಯುಭಾರ ಕುಸಿತದಿಂದ ಮಳೆ ಹೆಚ್ಚಳವಿದೆ ಎನ್ನುವ ಮಾಹಿತಿ ಆಧರಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಎಚ್ಚರಿಕೆಯ ಸೂಚನೆ ನೀಡಿದೆ.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ತುರ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಮೀನುಗಾರರು ಸಮುದ್ರಕ್ಕೆ ಇಳಿಯಬಾರದು, ನೀರು ಮತ್ತು ತಗ್ಗು ಪ್ರದೇಶದಲ್ಲಿ ಸಾರ್ವಜನಿಕರು, ಪ್ರವಾಸಿಗರು ತೆರಳದಂತೆ ಎಚ್ಚರ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ. ಮಂಗಳವಾರ (ಅ.16) ನಗರದ ಕೆಲವು ಭಾಗದಲ್ಲಿ ಸಾಧಾರಣದಿಂದ ಉತ್ತಮ ಮಳೆಯಾಗಿದ್ದು, ನಿರಂತರವಾಗಿ ಜಿಲ್ಲೆಯ ನಾನಾ ಭಾಗದಲ್ಲಿ ತುಂತುರು ಮಳೆ ದಿನವಿಡೀ ಕಾಣಿಸಿಕೊಂಡಿದೆ.
ಗುರುವಾರ (ಅ.17) ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ನಗರ, ಚಿಕ್ಕಮಗಳೂರು, ಹಾಸನ, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗೆ ಆರೆಂಜ್ ಅಲರ್ಟ್ ಹಾಗೂ ವಿಜಯನಗರ, ಮೈಸೂರು, ಕೊಡಗು, ದಾವಣಗೆರೆ, ಚಿತ್ರದುರ್ಗ, ಚಾಮರಾಜನಗರ, ಬಳ್ಳಾರಿ, ಹಾವೇರಿ, ಗದಗ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗೆ ಯೆಲ್ಲೊಅಲರ್ಟ್ ನೀಡಲಾಗಿದೆ.




