ಹಿರೇಬೆಟ್ಟು ಬಳಿ ಮರಳು ಅಕ್ರಮ ಸಂಗ್ರಹ: ಹಿಟಾಚಿ ವಾಹನ, ದೋಣಿ ಸಹಿತ ಹಲವಾರು ಸೊತ್ತುಗಳ ವಶಕ್ಕೆ
ಉಡುಪಿ: ಹಿರೇಬೆಟ್ಟು ಬಳಿ ಪರವಾನಿಗೆ ಇಲ್ಲದೆ ಮರಳು ಸಂಗ್ರಹಿಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಹೀರೆಬೆಟ್ಟು ಗ್ರಾಮದ ಕಂಬಳಗದ್ದೆಯಲ್ಲಿರುವ ಹಿರೇಬೆಟ್ಟು ಹೊಳೆಯಿಂದ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರಳನ್ನು ತೆಗೆದು ಸಾಗಾಟ ಮಾಡುವ ಬಗ್ಗೆ ಸಂಗ್ರಹಿಸಿ ಇಟ್ಟಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಮಣಿಪಾಲ ಪೊಲೀಸರು ದಾಳಿ ನಡೆಸಿ ಆರೋಪಿ ಕವನ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈತ ಹಾಗೂ ಶಿವಪ್ರಸಾದ್ ಹಿಟಾಚಿಯಿಂದ ಹಿರೇಬೆಟ್ಟು ಹೊಳೆಯಿಂದ 5 ಯುನಿಟ್ ಮರಳು ತೆಗೆದು ದಂಡೆಯ ಮೇಲೆ ಸಂಗ್ರಹಿಸಿಟ್ಟಿದ್ದರು. ಈ ಮರಳು, ಹಿಟಾಚಿ ವಾಹನ, ಎರಡು ದೋಣಿ, ದೋಣಿ ನಡೆಸುವ 4 ಹುಟ್ಟುಗಳು, ದೋಣಿ ಒಳಗಡೆ ಬುಟ್ಟಿ, ಸ್ಟೀಲ್ ಬಕೆಟ್ ಸಹಿತ ಹಲವಾರು ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





