May 5, 2026

ಕಾಪು: ರಸ್ತೆ ದಾಟುತ್ತಿದ್ದ ದಂಪತಿಗೆ ಖಾಸಗಿ ಬಸ್ ಢಿಕ್ಕಿ: ಪತಿ ಸ್ಥಳದಲ್ಲೇ ಮೃತ್ಯು, ಪತ್ನಿ ಗಂಭೀರ

0
image_editor_output_image-1060705586-1728542390668.jpg

ಉಡುಪಿ: ರಸ್ತೆ ದಾಟುತ್ತಿದ್ದ ದಂಪತಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಪತಿ ಸ್ಥಳದಲ್ಲೇ ಮೃತಪಟ್ಟರೆ, ಪತ್ನಿ ತೀವ್ರವಾಗಿ ಗಾಯಗೊಂಡ ಘಟನೆ ಉಡುಪಿ ರಾಷ್ಟ್ರೀಯ ಹೆದ್ದಾರಿ 66 ರ ಮೂಳೂರು ಬುಧವಾರ ರಾತ್ರಿ ನಡೆದಿದೆ.

ಕಾಪು ಭಾರತ್ ನಗರದ ನಿವಾಸಿ ಹಿದಾಯತ್ತುಲ್ಲಾ (55) ಮೃತ ದುರ್ದೈವಿಯಾಗಿದ್ದಾರೆ. ಇವರ ಪತ್ನಿ ಸಾವರ್ ಎಂಬವರು ತೀವ್ರ ಗಾಯಗೊಂಡಿದ್ದು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಚ್ಚಿಲ ಕಡೆಯಿಂದ ಕಾಪು ಕಡೆಗೆ ಹೋಗುತ್ತಿದ್ದ ಇವರು, ದಾರಿ ಮಧ್ಯೆ ಮೂಳೂರಿನಲ್ಲಿ ರಸ್ತೆಯ ಇನ್ನೊಂದು ಬದಿಯಲ್ಲಿರುವ ಹೋಟೆಲಿಗೆ ಹೋಗಲು ಬೈಕನ್ನು ನಿಲ್ಲಿಸಿ ಪತ್ನಿ ಜೊತೆ ರಸ್ತೆ ದಾಟುತಿದ್ದ ಸಂದರ್ಭದಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆ ಹೋಗುತ್ತಿದ್ದ ಖಾಸಗಿ ಬಸ್ಸು ಇವರಿಬ್ಬರಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ.

ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಪತಿ ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದು ಬಂದಿದೆ. ಮೃತರು ಪತ್ನಿ ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದ ಹಿದಾಯತ್ತುಲ್ಲಾ ರಜೆಯಲ್ಲಿ ಊರಿಗೆ ಬಂದಿದ್ದರು. ಕೆಲವೇ ದಿನಗಳಲ್ಲಿ ಮತ್ತೆ ಸೌದಿಗೆ ವಾಪಸ್ ಹೋಗುವವರಿದ್ದರು.ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!