ಉಡುಪಿ: ವರದಕ್ಷಿಣೆ ಕಿರುಕುಳಕ್ಕೆ ಕುಂದಾಪುರದ ಮೇಘನಾ ಶೆಟ್ಟಿ ಸಾವು, ಪತಿಯ ಬಂಧನ
ಉಡುಪಿ: ಕುಂದಾಪುರದ ಮಹಿಳಾ ಟೆಕ್ಕಿ ಬೆಂಗ್ಳೂರಲ್ಲಿ ವರದಕ್ಷಿಣೆಯ ದಾಹಕ್ಕೆ ಬಲಿಯಾಗಿದ್ದಾರೆ.
ವಿವೇಕ ನಗರದಲ್ಲಿ ಮಹಿಳೆ ವರದಕ್ಷಿಣೆಯ ದಾಹಕ್ಕೆ ಬೇಸತ್ತು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಉಡುಪಿ ಜಿಲ್ಲೆ ಕುಂದಾಪುರ ಮೂಲದ ಮೇಘನಾ ಶೆಟ್ಟಿ (27) ಎಂದು ಗುರುತ್ತಿಸಲಾಗಿದೆ.
ಈ ಸಂಬಂಧ ಮೃತಳ ಪೋಷಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆಕೆಯ ಪತಿ ಸುದೀಪ್ (30) ನನ್ನು ಬಂಧಿಸಿದ್ದಾರೆ.
ಮೇಘನಾ ಶೆಟ್ಟಿ 3 ವರ್ಷಗಳ ಹಿಂದೆ ಸಾಫ್ಟ್ವೇರ್ ಎಂಜಿನಿಯರ್ ಸುದೀಪ್‌ನನ್ನು ಮದುವೆಯಾಗಿದ್ದು, ದಂಪತಿಗೆ ಒಂದು ಮಗು ಇದೆ. ಇಬ್ಬರು ಖಾಸಗಿ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದು ಈಜಿಪುರದ ಬಾಡಿಗೆ ಮನೆಯಲ್ಲಿ ವಾಸವಾಗಿ ದ್ದರು. ಪೋಷಕರು ಕೂಡ ಪುತ್ರಿ ಮನೆ ಸಮೀಪದಲ್ಲೇ ವಾಸವಾಗಿದ್ದಾರೆ.
ಆರಂಭದಲ್ಲಿ ಚೆನ್ನಾಗಿದ್ದ ದಂಪತಿ ನಡುವೆ ಕೆಲ ತಿಂಗಳಿಂದ ಕೌಟುಂಬಿಕ ವಿಚಾರವಾಗಿ ಜಗಳ ನಡೆಯುತಿತ್ತು. ಪತಿ ಸುದೀಪ್, ಮೇಘನಾ ಶೆಟ್ಟಿಗೆ, ಸಂಬಳವನ್ನು ತನಗೆ ಕೊಡುವಂತೆ ಪೀಡಿಸುತ್ತಿದ್ದ. ಅದರಿಂದ ಕಾರು ಹಾಗೂ ಇತರ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದ.
ಆದರೆ ಮೇಘನಾ ನಿರಾಕರಿಸಿದ್ದರು ಎಂದು ಹೇಳಲಾಗಿದೆ. ಪತಿ ಸುದೀಪ್ ನಿರಂತರವಾಗಿ ಹಣ ತಂದು ಕೊಡುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದರಿಂದ ಬೇಸತ್ತ ಮೇಘನಾ ಶೆಟ್ಟಿ ಶುಕ್ರವಾರ ರಾತ್ರಿ ಮನೆಯ ಕೋಣೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆಲ ಹೊತ್ತಿನ ಬಳಿಕ ಕೋಣೆಯ ಬಾಗಿಲು ತೆರೆದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಪತಿ ಸುದೀಪ್, ಮೇಘನಾ ಶೆಟ್ಟಿ ಪೋಷಕರಿಗೆ ತಿಳಿಸಿದ್ದಾನೆ. ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಆದರೆ, ಪರೀಕ್ಷಿಸಿದ ವೈದ್ಯರು ಮೇಘನಾ ಶೆಟ್ಟಿ ಮೃತಪಟ್ಟಿದ್ದಾಳೆ ಎಂದು ದೃಢಪಡಿಸಿದ್ದಾರೆ. ಈ ಸಂಬಂಧ ಮೃತಳ ಪೋಷಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆಕೆಯ ಪತಿ ಸುದೀಪ್ (30) ನನ್ನು ಬಂಧಿಸಿದ್ದಾರೆ.