ವಿಟ್ಲ: ಭಾರೀ ಮಳೆಗೆ ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ವ್ಯಕ್ತಿ: ಜೀವವನ್ನು ಲೆಕ್ಕಿಸದೇ ವ್ಯಕ್ತಿಯನ್ನು ರಕ್ಷಿಸಿದ ಯುವಕರು
ವಿಟ್ಲ : ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ, ಪುತ್ತೂರು, ಸುಳ್ಯ ಭಾಗದಲ್ಲಿ ವ್ಯಾಪಕ ಮಳೆಯಾಗಿದ್ದು, ಮಧ್ಯಾಹ್ನ ಶುರುವಾದ ಭಾರೀ ಮಳೆಯಿಂದ ನದಿಗಳು ಉಕ್ಕಿ ಹರಿದಿದೆ. ಈ ವೇಳೆ ಆಯತಪ್ಪಿ ನದಿಗೆ ಬಿದ್ದ ವ್ಯಕ್ತಿಯನ್ನು ಯುವಕರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
ವಿಟ್ಲದ ಸುರಂಬಡ್ಕದ ಕಿಂಡಿ ಅಣೆಕಟ್ಟು ಸೇತುವೆ ಬಳಿ ಸಂಜೆ ವೇಳೆ ವ್ಯಕ್ತಿಯೊಬ್ಬರು ಸೇತುವೆಯಲ್ಲಿ ಹೋಗುತ್ತಿದ್ದಾಗ ಆಯತಪ್ಪಿ ನದಿಗೆ ಬಿದ್ದಿದ್ದಾರೆ.
ಕೂಡಲೇ ಅಲ್ಲೇ ಇದ್ದ ಯುವಕರು ನದಿಯ ಪ್ರವಾಹವನ್ನೂ ಲೆಕ್ಕಿಸದೆ ಹಾರಿ ಈಜಾಡಿಕೊಂಡು ಹೋಗಿ ವ್ಯಕ್ತಿಯನ್ನು ರಕ್ಷಣೆ ಮಾಡಿ ಅಪಾಯದಿಂದ ರಕ್ಷಿಸಿದ್ದಾರೆ.
ಚೆಕ್ಕಿದಕಾಡು ನಿವಾಸಿಗಳಾದ ಅಶೋಕ್ ಸಿ.ಹೆಚ್ ಹಾಗೂ ಸುರೇಶ್ ಸಿಎಚ್ ರಕ್ಷಣೆ ಮಾಡಿದ ಯುವಕರು. 70ರ ಹರೆಯದ ಉಮ್ಮರ್ ರಕ್ಷಿಸಲ್ಪಟ್ಟವರು.
ಉಮ್ಮರ್ ಅವರು ಹೊಳೆಗೆ ಬೀಳುವುದನ್ನು ನೋಡಿದ ಕೂಡಲೇ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಇಬ್ಬರು ಯುವಕರು ನದಿಗೆ ಹಾರಿ ಈಜಾಡಿಕೊಂಡು ಹೋಗಿ ಉಮ್ಮರ್ ಅವರನ್ನು ರಕ್ಷಿಸಿದ್ದಾರೆ.
ಕೂಡಲೇ ಸ್ಥಳದಲ್ಲೇ ಇದ್ದ ಸ್ಥಳೀಯರು ಸಾಥ್ ಕೊಟ್ಟಿದ್ದಾರೆ. ಯುವಕರ ಸಮಯಪ್ರಜ್ಞೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಸೇತುವೆಗೆ ಯಾವುದೇ ರೀತಿಯ ತಡೆ ಇಲ್ಲದೆ ಇರುವುದು ಇದಕ್ಕೆ ಕಾರಣವಾಗಿದೆನ್ನಲಾಗಿದೆ.