ಉಳ್ಳಾಲ: ರೌಡಿ ಖಾಲಿಯ ರಫೀಕ್ ಕೊಲೆ ಪ್ರಕರಣ: ನಾಲ್ವರು ಆರೋಪಿಗಳು ದೋಷಮುಕ್ತ
ಮಂಗಳೂರು: ಉಳ್ಳಾಲದ ಕೋಟೆಕಾರ್‌ನಲ್ಲಿ 2017ರಲ್ಲಿ ನಡೆದಿದ್ದ ರೌಡಿ ಖಾಲಿಯ ರಫೀಕ್‌ನ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
ನೂರಲಿ, ಜಿಯ ಆಲಿಯಾಸ್ ಇಸುಬು ಶಿಯಾದ್, ರಶೀದ್ ಮತ್ತು ಮಜೀಬ್ ಆಲಿಯಾಸ್ ಕಲ್ಲಟ್ರ ನಜೀಬ್ ಕೆ.ಎ. ದೋಷಮುಕ್ತಗೊಂಡವರು.
2017ರ ಫೆ.2ರಂದು ಖಾಲಿಯಾ ರಫೀಕ್ ಮತ್ತು ಆತನ ಸ್ನೇಹಿತರು ಸಂಚರಿಸುತ್ತಿದ್ದ ಕಾರಿಗೆ ಕೋಟೆಕಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಟಿಪ್ಪರ್ ಲಾರಿಯನ್ನು ಢಿಕ್ಕಿ ಹೊಡೆಸಲಾಗಿತ್ತು. ಕಾರಿನಿಂದ ಇಳಿದು ಪೆಟ್ರೋಲ್ ಬಂಕ್ ಕಡೆಗೆ ಓಡುತ್ತಿದ್ದ ಖಾಲಿಯ ರಫೀಕ್‌ನನ್ನು ಬೆನ್ನಟ್ಟಿಕೊಂಡು ಹೋಗಿದ್ದ ಆರೋಪಿಗಳು ಪಿಸ್ತೂಲ್‌ನಿಂದ ಗುಂಡು ಹಾರಿಸಿ ಬಳಿಕ ತಲವಾರಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು ಎಂದು ಆರೋಪಿಸಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಒಟ್ಟು 9 ಮಂದಿ ಆರೋಪಿಗಳನ್ನು ಗುರುತಿಸಲಾಗಿತ್ತು. ಈ ಪೈಕಿ ನಾಲ್ವರನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ. ಓರ್ವ ಆರೋಪಿ ಮೃತಪಟ್ಟಿದ್ದಾನೆ. ಇನ್ನೋರ್ವ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದಾನೆ.
ಆರೋಪಿಗಳ ಪರ ಹಿರಿಯ ನ್ಯಾಯವಾದಿ ವೈ. ವಿಕ್ರಂ ಹೆಗ್ಡೆ, ರಾಜೇಶ್ ಕೆ.ಜಿ. ಮತ್ತು ಅಬ್ದುಲ್ ಅಜೀಜ್ ಬಾಯರ್ ವಾದಿಸಿದ್ದರು.