ಮೂರು ಅಂತಸ್ತಿನ ಕಟ್ಟಡ ಕುಸಿತ: 8 ಮಂದಿ ಮೃತ್ಯು, 28 ಮಂದಿಗೆ ಗಾಯ
ಉತ್ತರಪ್ರದೇಶ: ಲಕ್ನೋ ಟ್ರಾನ್ಸ್ ಪೋರ್ಟ್ ನಗರ ಪ್ರದೇಶದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದ ಘಟನೆಯಲ್ಲಿ 8 ಮಂದಿ ಮೃತಪಟ್ಟಿದ್ದು, 28 ಮಂದಿ ಗಾಯಗೊಂಡಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಶನಿವಾರ ಸಂಜೆ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದ್ದು, ಅವಶೇಷಗಳಡಿಯಲ್ಲಿ ಸಿಲುಕಿಕೊಂಡವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಗಾಯಾಳುಗಳನ್ನು ಜಿಲ್ಲೆಯ ಲೋಕ ಬಂಧು ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡಿರುವ ಆಯುಕ್ತ ಜಿ ಎಸ್ ನವೀನ್ ಹೇಳಿದ್ದಾರೆ.
ಈ ಕಟ್ಟಡವನ್ನು ಸುಮಾರು 4 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು, ಘಟನೆಯ ಸಮಯದಲ್ಲಿ ಕೆಲವು ನಿರ್ಮಾಣ ಕಾರ್ಯಗಳು ನಡೆಯುತ್ತಿದ್ದವು. ಶನಿವಾರ ಸಂಜೆ 4:45ಕ್ಕೆ ಘಟನೆ ಸಂಭವಿಸಿದಾಗ ಸಂತ್ರಸ್ತರಲ್ಲಿ ಹೆಚ್ಚಿನವರು ನೆಲ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕಟ್ಟಡದ ಪಿಲ್ಲರ್ ಬಿರುಕು ಬಿಟ್ಟಿತ್ತು. ಮಳೆ ಬಂದಿದ್ದರಿಂದ ಕೆಳಮಹಡಿಗೆ ಬಂದಿದ್ದೆವು. ಆದರೆ ಇಡೀ ಕಟ್ಟಡ ಏಕಾಏಕಿ ನಮ್ಮ ಮೇಲೆ ಕುಸಿದು ಬಿದ್ದಿದೆ ಎಂದು ಘಟನೆಯಲ್ಲಿ ಗಾಯಗೊಂಡ ಕೆಲವರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪರಿಸ್ಥಿತಿಯನ್ನು ಅವಲೋಕಿಸಿದ್ದು, ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ನಿರ್ದೇಶನ ನೀಡಿದ್ದಾರೆ ಎಂದು ತಿಳಿದು ಬಂದಿದೆ.