ರಾಜಕೀಯದಲ್ಲೂ ಸಕ್ರಿಯವಾಗಿ ಕಾಣಿಸಿಕೊಳ್ಳದ ನಳಿನ್ ಕುಮಾರ್ ಕಟೀಲ್
ಬೆಂಗಳೂರು: ನಳಿನ್ ಕುಮಾರ್ ಕಟೀಲ್ .. ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿ ರಾಜ್ಯದಲ್ಲಿ ಪಕ್ಷದ ಸಂಘಟನೆ ಮಾಡಿದವರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತತವಾಗಿ ಮೂರು ಬಾರಿ ಸಂಸದರಾಗಿ ಆಯ್ಕೆಗೊಂಡಿದ್ದವರು.
ತಮ್ಮ 18 ನೇ ವಯಸ್ಸಿನಲ್ಲೇ ಆರ್ ಎಸ್ ಎಸ್ ಸಂಘಟನೆಯಲ್ಲಿ ಪೂರ್ಣಾವಧಿ ಕಾರ್ಯಕರ್ತರಾಗಿ ತೊಡಗಿಸಿಕೊಂಡಿದ್ದವರು. ಕೋಮು ಸೂಕ್ಷ್ಮ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕವೂ ಒಂದು ಕಾಲದಲ್ಲಿ ಕಮಲದ ಫೈರ್ ಬ್ರಾಂಡ್ ಎಂದೇ ಗುರುತಿಸಿಕೊಂಡವರು. ಆದರೆ ಬದಲಾದ ರಾಜಕೀಯ ಸನ್ನಿವೇಶ ನಳಿನ್ ಕುಮಾರ್ ಕಟೀಲ್ ಅವರನ್ನು ಮೂಲೆಗುಂಪು ಮಾಡಿದೆ.
ಬಿಜೆಪಿ ಪ್ರಭಾವಿ ನಾಯಕರಾಗಿ, ಹೈಕಮಾಂಡ್ ಜೊತೆಗೆ ಉತ್ತಮ ಸಂಪರ್ಕ ಇಟ್ಟುಕೊಂಡಿದ್ದರೂ ಬಿಜೆಪಿಯಲ್ಲಿರುವ ಆಂತರಿಕ ಭಿನ್ನಮತ ನಳಿನ್ ಕುಮಾರ್ ಕಟೀಲ್ ಅವರನ್ನು ಮೂಲೆಗೆ ಸರಿಸಿದೆ.
ಅತ್ತ ಕೇಂದ್ರದಲ್ಲೂ, ಇತ್ತ ರಾಜ್ಯದಲ್ಲೂ, ಅಷ್ಟೇ ಏಕೆ ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯದಲ್ಲೂ ನಳಿನ್ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿಲ್ಲ. ನಳಿನ್ ಮೂಲೆಗುಂಪಾಗಿಸಲು ವಿರೋಧಿ ಬಣದ ತಂತ್ರಗಾರಿಕೆ ಬಹುತೇಕ ಯಶಸ್ವಿಯಾಗಿದ್ದು, ಅವರ ರಾಜಕೀಯ ಭವಿಷ್ಯವೂ ಅತಂತ್ರವಾಗಿದೆ.





