ಸುಳ್ಯ: ಅವಿನಾಶ್ ಮೋಟಾರ್ಸ್ ನ ಮಾಲಕ ಆತ್ಮಹತ್ಯೆ
ಸುಳ್ಯ: ಸುಳ್ಯ ಭಾಗದಲ್ಲಿ ಗ್ರಾಮೀಣ ಸಂಪರ್ಕ ಕ್ರಾಂತಿಯ ಹರಿಕಾರನಾಗಿ, ಅವಿನಾಶ್ ಮೋಟಾರ್ಸ್ ನ ಮಾಲಕರಾಗಿ ಖ್ಯಾತಿಯಾಗಿದ್ದ ನಾರಾಯಣ ರೈ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ರಾತ್ರಿ ನಡೆದಿದ್ದು, ಇಂದು (ಮಂಗಳವಾರ )ಬೆಳಕಿಗೆ ಬಂದಿದೆ.
ಅವಿನಾಶ್ ರೈಯವರು ಅರಂಬೂರಿನ ತನ್ನ ಮನೆಯಲ್ಲಿದ್ದರು. ಅವರ ಪತ್ನಿ ಮತ್ತು ಮಕ್ಕಳು ಮದುವೆ ಸಮಾರಂಭವೊಂದಕ್ಕೆ ಬೆಂಗಳೂರಿಗೆ ತೆರಳಿದ್ದ ಹಿನ್ನಲೆಯಲ್ಲಿ ಸಂಬಂಧಿಯಾಗಿರುವ ಯುವಕನೊಬ್ಬ ಮನೆಯಲ್ಲಿದ್ದರು.
ರಾತ್ರಿ 11.45 ರ ಸುಮಾರಿಗೆ ಅವರು ಅವಿನಾಶ್ ಮೋಟಾರ್ಸ್ ನ ಉಸ್ತುವಾರಿ ನೋಡಿಕೊಳ್ಳುತ್ತಿರುವ ತನ್ನ ತಂಗಿಯಾಗಿರುವ ನಳಿನಿಯವರಿಗೆ ವಾಟ್ಸಾಪ್‌ನಲ್ಲಿ ವಾಯ್ಸ್ ಮೆಸೇಜ್ ಕಳುಹಿಸಿದ್ದರು. ತಾನು ನಿಮ್ಮನ್ನೆಲ್ಲಾ ಬಿಟ್ಟು ಹೋಗುವುದಾಗಿ ವಾಯ್ಸ್ ಮೆಸೇಜ್‌ನಲ್ಲಿತ್ತು. ಆದರೆ ತಡರಾತ್ರಿಯಾಗಿದ್ದುದರಿಂದ ಅವರು ಇಂದು ಬೆಳಿಗ್ಗೆಯಷ್ಟೇ ಈ ಮೆಸೇಜ್ ನೋಡಿದ್ದರು.
ಕೂಡಲೇ ಅವರು ಮನೆಯಲ್ಲಿದ್ದ ಯುವಕನಿಗೆ ಫೋನ್ ಮಾಡಿದಾಗ ಅವರು ಫೋನ್ ತೆಗೆದಿರಲಿಲ್ಲ. ಈ ಹಿನ್ನಲೆಯಲ್ಲಿ ಫಿಟ್ಟರ್‌ಗೆ ಕರೆ ಮಾಡಿ ತಕ್ಷಣ ಹೋಗುವಂತೆ ತಿಳಿಸಿದರು.
ಕೂಡಲೇ ಅವರು ಮನೆಗೆ ಹೋಗಿ ಯುವಕನನ್ನು ಎಬ್ಬಿಸಿ ನಾರಾಯಣ ರೈಗಳ ಕೋಣೆಗೆ ಹೋಗಿ ನೋಡಿದಾಗ ಅವರು ಕೊಠಡಿಯೊಳಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿದ್ದರು.





