ಕೊಡಗಿನ ಹಲವೆಡೆ 11 ಪ್ರಕರಣಗಳಲ್ಲಿ ಭಾಗಿಯಾದ ಇಬ್ಬರು ಆರೋಪಿಯ ಬಂಧನ
ವೀರಾಜಪೇಟೆ : ಕೇರಳ, ಮೈಸೂರು ಹಾಗೂ ಕೊಡಗಿನ ಹಲವೆಡೆ 11 ಪ್ರಕರಣಗಳಲ್ಲಿ ಭಾಗಿಯಾದ ಇಬ್ಬರು ಆರೋಪಿಗಳನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಕೇರಳದ ಕಣ್ಣನೂರಿನ ಇರಟ್ಟಿ ತಾಲೂಕಿನ ಉಳಿಕಲ್ ಮಂಟಪ ಪರಂಬುವಿನ ಸಲೀಂ.ಟಿ.ಎ (42) ಹಾಗೂ ಕೊಡಗಿನ ಸೋಮವಾರಪೇಟೆ ತಾಲೂಕಿನ ಚೌಡ್ಲು ಗ್ರಾಮದ ಗಾಂಧಿ ನಗರ ನಿವಾಸಿ, ಕೂಲಿ ಕೆಲಸ ಮಾಡಿಕೊಂಡಿದ್ದ ಸಂಜಯ್ ಕುಮಾರ್ ಎಂ.ಎ (30) ಬಂಧಿತ ಆರೋಪಿಗಳು.
ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್,ಆ. 28 ರ ರಾತ್ರಿ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಭೇತ್ರಿ ಗ್ರಾಮದಲ್ಲಿ ನಾಸರ್ ಕೂರನ್ ರವರ ಸೂಪರ್ ಮಾರ್ಕೆಟ್ ಅಂಗಡಿಗೆ ನುಗ್ಗಿದ ಕಳ್ಳರು ರೋಲಿಂಗ್ ಶೆಟ್ರಸ್ ಬೀಗ ಮುರಿದು ಕ್ಯಾಶ್ ಬಾಕ್ಸ್ ನಿಂದ 25000 ರೂ ನಗದನ್ನು ಮತ್ತು ಸಿಗರೇಟ್ ಪ್ಯಾಕೆಟ್‌ಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ವೈಜ್ಞಾನಿಕ ತನಿಖಾ ಕ್ರಮವನ್ನು ಕೈಗೊಂಡು ಆ.೩೧ ರಂದು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.





