ಕುಂದಾಪುರ: ಬಾಡಿಗೆ ಕಟ್ಟಡದಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ
ಕುಂದಾಪುರ: ನಗರದ ಚಿಕ್ಕನಸಾಲು ರಸ್ತೆಯಲ್ಲಿ ಜೈ ಹಿಂದ್ ಹೊಟೇಲಿನ ಎದುರುಗಡೆ ಇರುವ ನಾಗರಾಜ ಎಂಬವರಿಗೆ ಸೇರಿದ ಬಾಡಿಗೆ ಕಟ್ಟಡದಲ್ಲಿ ಚಿನ್ನದ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೋರ್ವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕುಂದಾಪುರದಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿ ಸಂತೋಷ್ ಆಚಾರ್ಯ (45) ಅವಿವಾಹಿತರಾಗಿದ್ದರು ಎಂದು ಗುರುತಿಸಲಾಗಿದೆ.
ಸಂತೋಷ ಆಚಾರ್ಯ ಕಳೆದ 25 ವರ್ಷಗಳಿಂದ ಕುಂದಾಪುರ ನಗರದಲ್ಲಿ ಚಿನ್ನದ ಕೆಲಸ ಮಾಡಿಕೊಂಡಿದ್ದರು. ವಾರಕ್ಕೊಮ್ಮೆ ಬ್ರಹ್ಮಾವರ ಬಳಿಯ ಉಳ್ಳೂರಿನಲ್ಲಿರುವ ತನ್ನ ಮನೆಗೆ ಹೋಗಿ ಬರುತ್ತಿದ್ದರು.
ನಾಗರ ಪಂಚಮಿಯ ಪ್ರಯುಕ್ತ ಅಣ್ಣ ಮನೆಗೆ ಬರಲಿಲ್ಲವೆಂದು ಸಹೋದರ ಸುರೇಶ್ ಆಚಾರ್ಯರವರು ಫೋನ್ ಮಾಡಿದ್ದು ಫೋನ್ ಸ್ವಿಚ್ ಆಫ್ ಆಗಿತ್ತು. ನಂತರ ಅವರು ಅಣ್ಣನ ಮನೆಗೆ ಸ್ನೇಹಿತರೊಬ್ಬರನ್ನು ಕಳುಹಿಸಿ ವಿಚಾರಿಸಿದಾಗ ಮನೆಯ ಒಳಗಿನಿಂದ ದುರ್ವಾಸನೆ ಬರುತ್ತಿದೆ ಎಂದು ತಿಳಿಸಿದ್ದು ಸಂತೋಷ್ ಆಚಾರ್ಯ ಮೃತಪಟ್ಟಿರುವ ವಿಷಯ ಬೆಳಕಿಗೆ ಬಂದಿದೆ.




