ಬ್ಯಾಂಕ್‌ನ ಅಧಿಕಾರಿಗಳ ಕಿರುಕುಳ: ಟೆಕ್ಕಿ ಆತ್ಮಹತ್ಯೆ
ಬೆಂಗಳೂರು: ಸಾಲ ವಸೂಲಾತಿ ಏಜೆಂಟರು ಮತ್ತು ಪ್ರಮುಖ ಬ್ಯಾಂಕ್‌ನ ಅಧಿಕಾರಿಗಳ ಕಿರುಕುಳದಿಂದ ಬೇಸತ್ತ 40 ವರ್ಷದ ನಿರುದ್ಯೋಗಿ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆನೇಕಲ್ ನಲ್ಲಿ ನಡೆದಿದೆ.
ಆನೇಕಲ್ ರೈಲು ನಿಲ್ದಾಣದ ಬಳಿ ಇರುವ ಗೌರಿಶಂಕರ್ ಶರ್ಮಾ ಅವರ ಅಪಾರ್ಟ್‌ಮೆಂಟ್‌ಗೆ ನುಗ್ಗಿದ ಸಾಲ ವಸೂಲಾತಿ ಏಜೆಂಟರು 18 ತಿಂಗಳಿಂದ ಕಂತುಗಳನ್ನು ಪಾವತಿಸದ ಕಾರಣ ಅವರನ್ನು ಮನೆಯಿಂದ ಹೊರಗೆ ಹಾಕಿ ಅವಮಾನ ಮಾಡಿದ್ದಾರೆ ಎಂದು ಅವರ ಸೋದರ ಮಾವ ಬಿಹಾರದ ಉದ್ಯಮಿ ರಾಜೀವ್ ರಾಜನ್ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಗೌರಿ ಶಂಕರ್ ಶರ್ಮಾ ಸಾವಿಗೆ ಬ್ಯಾಂಕ್‌ನ ಸಹಾಯಕ ಉಪಾಧ್ಯಕ್ಷ, ಗೃಹ ಸಾಲ ವಿಭಾಗದ ರಾಕೇಶ್ ಕುಮಾರ್ ಸಿನ್ಹಾ ಮತ್ತು ಸಿಬ್ಬಂದಿ ಪ್ರಸನ್ನ ಸಿ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಶರ್ಮಾ ಶುಕ್ರವಾರ (ಜುಲೈ 12) ಮೃತಪಟ್ಟಿದ್ದರೂ, ಸೋಮವಾರ (ಜುಲೈ 15) ಅವರ ಮೃತದೇಹವನ್ನು ಕುಟುಂಬಸ್ಥರು ಗುರುತಿಸಿದ್ದಾರೆ, ಗುರುವಾರ (ಜುಲೈ 18) ಘಟನೆ ಬೆಳಕಿಗೆ ಬಂದಿದೆ.




