ಮಂಗಳೂರು: ಡಿ.ಸಿ ಯ ಅಧಿಕೃತ ಮೊಬೈಲ್ ಸಂಖ್ಯೆ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ, ರಜೆ ಬಗ್ಗೆ ಕರೆ: ರಜೆಯ ಬಗ್ಗೆ ಅನಗತ್ಯ ಹುಚ್ಚಾಟ ಬೇಡ: ದ.ಕ ಜಿಲ್ಲಾಧಿಕಾರಿ ಎಚ್ಚರಿಕೆ
ಮಂಗಳೂರು: ಜಿಲ್ಲಾಧಿಕಾರಿಯ ಅಧಿಕೃತ ಮೊಬೈಲ್ ಸಂಖ್ಯೆಯನ್ನು ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಂಡು, ಕರೆ ಮಾಡಿ ರಜೆ ಕೇಳುವಂತೆ ಜನರಲ್ಲಿ ಹೇಳಲಾಗುತ್ತಿದೆ. ಆ ಮೂಲಕ ರಜೆಯ ಬಗ್ಗೆ ಅನಗತ್ಯ ಹುಚ್ಚಾಟ ಸೃಷ್ಟಿಸಲಾಗುತ್ತಿದೆ. ಇದು ತಪ್ಪು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಎಚ್ಚರಿಸಿದ್ದಾರೆ.
ಮಳೆಯ ಕಾರಣಕ್ಕಾಗಿ ಶಾಲಾ ಕಾಲೇಜುಗಳಿಗೆ ರಜೆಗೆ ಸಂಬಂಧಿಸಿ ದ.ಕ. ಜಿಲ್ಲಾಧಿಕಾರಿಯ ಅಧಿಕೃತ ಮೊಬೈಲ್‌ಗೆ ನಿರಂತರವಾಗಿ ಕಾಲ್‌ಗಳು ಬರುತ್ತಿದ್ದು, ಇದರಿಂದಾಗಿ ಸಮಸ್ಯೆಯಾಗಿದೆ.
ನಿಮಿಷಕ್ಕೆ 6ರಿಂದ 8ರಂತೆ ಐದಾರು ಗಂಟೆಯಲ್ಲಿ ನೂರಾರು ಕರೆಗಳು ಬಂದಿವೆ. ತಡರಾತ್ರಿಯವರೆಗೂ ಈ ರೀತಿ ಕರೆಗಳು ಬರುತ್ತವೆ. ಮಳೆಗಾಲದ ಸಮಯದಲ್ಲಿ ವಿಪತ್ತು ಮತ್ತಿತರ ತೀರಾ ಅಗತ್ಯ ಸಂದರ್ಭಗಳಿಗೆ ಜಿಲ್ಲಾಧಿಕಾರಿಯ ಮೊಬೈಲ್ ಸಂಖ್ಯೆಯು ಬಹುಮುಖ್ಯ ಕೊಂಡಿಯಾಗಿದೆ. ಜನರು ಸಹಾಯಕ್ಕಾಗಿ ಕರೆ ಮಾಡುತ್ತಾರೆ. ಅದರ ಮಧ್ಯೆ ರಜೆ ಕೇಳುವ ನಿರಂತರ ಕರೆಗಳಿಂದ ಅಧಿಕೃತ ಮೊಬೈಲ್ ಸಂಖ್ಯೆಯನ್ನು ಬಳಸುವುದೇ ಕಷ್ಟವಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಕರೆ ಮಾಡುವವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳೇ ಅಲ್ಲ. ಮಕ್ಕಳ ಹೆಸರಿನಲ್ಲಿ ಕರೆಗಳು ಬರುತ್ತಿದೆ. ಇದು ಮಕ್ಕಳ ವಿಚಾರವಾಗಿರುವುದರಿಂದ ಈವರೆಗೆ ಕಠಿಣ ಕ್ರಮ ಕೈಗೊಂಡಿಲ್ಲ. ಜಿಲ್ಲಾಧಿಕಾರಿಯ ಆದೇಶವೆಂಬಂತೆ ನಕಲಿ ಪತ್ರಗಳನ್ನು ಸೃಷ್ಟಿಸಿ ಹಂಚಿಕೊಳ್ಳಲಾಗುತ್ತಿದೆ. ಇದೇ ರೀತಿ ಮುಂದುವರಿದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಮಳೆಯಿಂದಾಗಿ ಭೂ ಕುಸಿತ, ಮನೆ ಕುಸಿತ, ರಸ್ತೆ, ವಿದ್ಯುತ್, ಪ್ರಾಣ ಹಾನಿ ಇತ್ಯಾದಿಗಳ ನಿರ್ವಹಣೆಗಾಗಿ ಇರುವ ನಿಯಂತ್ರಣಾ ಕೊಠಡಿಗೆ ಅನಗತ್ಯ ಕರೆಗಳು ಬರುತ್ತಿದ್ದು, ಇದನ್ನು ನಿರ್ವಹಿಸಲು ತೊಂದರೆಯಾಗುತ್ತಿದೆ. ಇದರಿಂದಾಗಿ ವಿಪತ್ತಿನಿಂದ ತೊಂದರೆಗೊಳಗಾದ ನೈಜ ಸಂತ್ರಸ್ತರ ಅಹವಾಲು ಸಕಾಲದಲ್ಲಿ ಜಿಲ್ಲಾಡಳಿತಕ್ಕೆ ತಲುಪದೆ, ತುರ್ತು ಪರಿಹಾರ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದೂ ತಿಳಿದುಬಂದಿದೆ. ಆದ್ದರಿಂದ ಇಂತಹ ಹುಚ್ಚಾಟ ಈ ಕೂಡಲೇ ನಿಲ್ಲಿಸಬೇಕು, ಹಾಗೂ ರಜೆ ಬಗ್ಗೆ ಗೊಂದಲ ಸೃಷ್ಠಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.




