ಕುಂದಾಪುರ: ಪತಿ-ಪತ್ನಿಯ ನಡುವೆ ಜಗಳ: ತುಂಬಿ ಹರಿಯುತ್ತಿದ್ದ ನದಿಗೆ ಹಾರಿದ ಪತಿ
ಕುಂದಾಪುರ: ಪತಿ-ಪತ್ನಿಯ ನಡುವಿನ ಕೌಟುಂಬಿಕ ಕಲಹದಿಂದಾಗಿ ಪತಿಯು ತುಂಬಿ ಹರಿಯುತ್ತಿದ್ದ ವಾರಾಹಿ ನದಿಗೆ ಹಾರಿ ನೀರಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾದ ಘಟನೆ ಮಂಗಳವಾರ ಮಧ್ಯಾಹ್ನ 1.30ರ ಸುಮಾರಿಗೆ ಕಂಡ್ಲೂರು ಸಮೀಪ ಸಂಭವಿಸಿದೆ.
ಕಾಳಾವರ ಗ್ರಾಮದ ಹರೀಶ್ (44) ನದಿಗೆ ಹಾರಿ ನಾಪತ್ತೆಯಾದವರು. ಅವರು ವೀಡಿಯೋಗ್ರಾಫರ್ ಆಗಿ ಕೆಲಸ ಮಾಡಿಕೊಂಡಿದ್ದರು.
ಪತಿ-ಪತ್ನಿಯ ಜಗಳದ ಹಿನ್ನೆಲೆಯಲ್ಲಿ ಕಂಡ್ಲೂರು ಠಾಣೆಗೆ ಹೋಗಿ ಮರಳಿ ಪತ್ನಿ, ತಾಯಿ, ಅಕ್ಕನೊಂದಿಗೆ ರಿಕ್ಷಾದಲ್ಲಿ ಬರುತ್ತಿದ್ದರು. ಕಂಡ್ಲೂರು ಸೇತುವೆ ಬಳಿ ತಲುಪಿದಾಗ ಕೈಗೆ ಕಟ್ಟಿದ್ದ ತಾಯತವನ್ನು ನದಿಗೆ ಎಸೆದು ಬರುತ್ತೇನೆಂದು ಹೇಳಿ ಹರೀಶ್ ರಿಕ್ಷಾವನ್ನು ನಿಲ್ಲಿಸುವಂತೆ ಚಾಲಕನಿಗೆ ಹೇಳಿದರು.
ರಿಕ್ಷಾದಿಂದ ಇಳಿದು ಪತ್ನಿ, ತಾಯಿ, ಅಕ್ಕ ನೋಡ ನೋಡುತ್ತಿದ್ದಂತೆ ಸೇತುವೆಯಿಂದ ನದಿಗೆ ಹಾರಿದರು. ಸ್ಥಳದಲ್ಲಿ ಕೆಲವು ಮಂದಿ ಇದ್ದರೂ ಭಾರೀ ಮಳೆಯ ಕಾರಣ ತುಂಬಿ ಹರಿಯುತ್ತಿದ್ದ ನದಿಗೆ ಇಳಿದು ರಕ್ಷಣೆ ಮಾಡುವುದು ಕಷ್ಟವಾಗಿತ್ತು.
ಮಾಹಿತಿ ತಿಳಿದ ಕಂಡ್ಲೂರು ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಕುಂದಾಪುರದ ಅಗ್ನಿಶಾಮಕ ದಳದವರು, ವಿಪತ್ತು ನಿರ್ವಹಣ ಪಡೆಯವರು ದೋಣಿ ಬಳಸಿ ಹುಡುಕಾಟ ನಡೆಸಿದರು. ಸ್ಥಳೀಯ ದೋಣಿಯವರೂ ಸಹಕರಿಸಿದರು. ಸಂಜೆಯ ವರೆಗೂ ಹುಡುಕಿದರೂ ಹರೀಶ್ ಅವರ ಲಭಿಸಿಲ್ಲ.





