ಉಡುಪಿ: ಸಾವಿನಲ್ಲೂ ಒಂದಾದ ಸತಿ-ಪತಿ: ಮೃತ ಅಶ್ವಿನಿ ಇನ್ಸ್ಟಾಗ್ರಾಮ್ ಪೋಸ್ಟ್ ವೈರಲ್
ಉಡುಪಿz ಅಂಬಲಪಾಡಿಯ ಮನೆಯಲ್ಲಿ ನಡೆದಿದ್ದ ಅಗ್ನಿ ಅವಘಡದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಅಶ್ವಿನಿ ಅವರು ಚಿಕಿತ್ಸೆ ಫಲಕಾರಿಯಾಗದೆ ಇಹ*ಲೋಕ ತ್ಯಜಿಸಿದ್ದಾರೆ.
ಉದ್ಯಮಿ ರಮಾನಂದ ಶೆಟ್ಟಿ ಅವರ ಮನೆಯಲ್ಲಿ ನಿನ್ನೆ ಅಗ್ನಿ ಆಕಸ್ಮಿಕ ನಡೆದಿದ್ದು, ಗಂಭೀರ ಸ್ಥಿತಿಯಲ್ಲಿದ್ದ ರಮಾನಂದ ಶೆಟ್ಟಿ ನಿನ್ನೆ ಮೃತಪಟ್ಟಿದ್ದರು. ಉಡುಪಿಯ ಅಂಬಲಪಾಡಿಯಲ್ಲಿ ಶೆಟ್ಟಿ ಬಾರ್ ಅಂಡ್ ರೆಸ್ಟೋರೆಂಟ್ ನಡೆಸುತ್ತಿದ್ದ ರಮಾನಂದ ಶೆಟ್ಟಿ ಅವರ ಪತ್ನಿ ಅಶ್ವಿನಿ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷೆಯಾಗಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಅಕ್ಟಿವ್ ಆಗಿದ್ದ ಅಶ್ವಿನಿ ಶೆಟ್ಟಿ ಅವರಿಗೆ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದರು. ಅಶ್ವಿನಿ ಅವರು 2017 ರಲ್ಲಿ ತಮ್ಮ ಇನ್ಸ್‌ಟಾಗ್ರಾಮ್ ಕ್ಯಾಬೋಸ್ ಬಳ್ಳಾಲ್ಸ್ ಎಂಬ ಪೇಜ್‌ನಲ್ಲಿ ಹಂಚಿಕೊಂಡ ಪೋಸ್ಟ್ ಈಗ ವೈರಲ್ ಆಗಿದೆ. ಸಾಯುವ ವರೆಗೂ ನಾನೂ ನೀನು ಜೊತೆಗಿರುವೆವು ಎಂದು ಪತಿಯ ಜೊತೆಗಿರುವ ಪೋಟೋವನ್ನು ತಮ್ಮ ಪೇಜ್‌ನಲ್ಲಿ ಹಂಚಿಕೊಂಡಿದ್ದರು. ಇದೀಗ ಪತಿ ಪತ್ನಿ ಇಬ್ಬರೂ ಜೊತೆಯಾಗಿ ಇಹಲೋಕದ ಯಾತ್ರೆ ಮುಗಿಸಿರುವುದು ನಿಜಕ್ಕೂ ಕಾಕತಾಳಿಯವೇ ಆಗಿದೆ.

ಅಶ್ವಿನಿ ಅವರು ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಆಚರಣೆಗಳು ಹಾಗೂ ಹಿಂದೂ ಧರ್ಮದ ಪ್ರಮುಖ ಆಚರಣೆಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಜನರ ಮೆಚ್ಚುಗೆ ಪಡೆದುಕೊಂಡಿದ್ದರು. ನಿನ್ನೆ ಮುಂಜಾನೆ ನಡೆದ ಅಗ್ನಿ ಅವಘಡದಲ್ಲಿ ಗಂಭೀರ ಗಾಯಗೊಂಡಿದ್ದ ಅಶ್ವಿನಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅಶ್ವಿನಿ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸಂತಾಪ ಸೂಚಿಸಿದ್ದಾರೆ.





