ಮುಗ್ಧ ಮಗುವಿನ ಭಾವದಿ ಅರಳಿದ ಎಲ್. ಎನ್ ಕೂಡುರ್:ಹೀಗೆ ಸಾಗಲಿ ಬದುಕು: ಬರಹ: ರಾಧಾಕೃಷ್ಣ ಎರುಂಬು, ಆಡಳಿತಾಧಿಕಾರಿವಿಠ್ಠಲ್ ಜೇಸಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ವಿಟ್ಲ
ಮುಗ್ಧ ಮಗುವಿನ ಭಾವದಿ ಅರಳಿದ ಎಲ್. ಎನ್ ಕೂಡುರ್:ಹೀಗೆ ಸಾಗಲಿ ಬದುಕು
ಬರಹ :-🖊️ರಾಧಾಕೃಷ್ಣ ಎರುಂಬು, ಆಡಳಿತಾಧಿಕಾರಿ
ವಿಠ್ಠಲ್ ಜೇಸಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ವಿಟ್ಲ
“ಬೆಳೆವ ಸಿರಿ ಮೊಳಕೆಯಲ್ಲಿ” ಇದು ಹಿರಿಯರು ತಲೆಮಾರಿನಿಂದ ತಲೆಮಾರಿಗೆ ಗಾದೆ ಮಾತಿನ ಮೂಲಕ ದಾಟಿಸಿಬಿಟ್ಟ ಅರ್ಥಗರ್ಭಿತ ಮಾತು. ಚಿಗುರಿದ ಮೊಳಕೆಯ ಪ್ರಶಂಸೆ ಎನ್ನುವುದಕ್ಕಿಂತಲೂ ಬೆಳೆಯಬೇಕೆಂಬ ಮೊಳಕೆಯ ತವಕ ಇಲ್ಲಿ ವ್ಯಕ್ತವಾಗಿದೆ. ಇದು ಬೆಳೆವ ಹುಡುಗರಿಗೂ ಅನ್ವಯಿಸುತ್ತದೆ.ಇಂತಹ ಮಾತುಗಳು “ಬಲಿದಂತೆ ಒಲಿಯುವ ಮಕ್ಕಳ ಆಸಕ್ತಿಗೆ ಪ್ರೋತ್ಸಾಹಕ ಧಾರೆಯಾಗುತ್ತದೆ”.
ಇಷ್ಟೆಲ್ಲ ಬರೆದಿರುವುದು ನಮ್ಮ ಎಳೆ ಚಿಗುರು ಮೋನಿಷ್ ವಿಟ್ಲರವರ ಬಗ್ಗೆ. ಕೈಯಲ್ಲಿ ಹಿಡಿದ ಕುಂಚ ಮನದಲ್ಲಿ ಮೂಡಿದ ಭಾವಗಳನ್ನು ಬರೆಯುತ್ತದೆ. ಇತ್ತೀಚೆಗೆ ಅಗಲಿದ , ವಿಟ್ಲಪರಿಸರದ ಜನರ ಕಂಬನಿಯಲ್ಲಿ ಇನ್ನೂ ಮಾಸದೆ ಇರುವ ಎಲ್. ಎನ್ ಕುಡೂರು ರವರು ಈ ಮಗುವಿನ ಮನಸಿನ ಮೇಲೆ ಅಚ್ಚಾಗಿಸಿದ ಭಾವ ತನ್ನ ಕೈಯಲ್ಲಿಯ ಸೀಸದಕಡ್ಡಿಯಲ್ಲಿ ಹಾಳೆಯ ಮೇಲೆ ಪಡಿಯಚ್ಚಾಗಿಸಿದ ಭಾವಚಿತ್ರ. ಚಿತ್ರ ಕಲೆಗಾಗಿ ಯಾವುದೇ ಗುರುವನ್ನು ಆಶ್ರಯಿಸದೆ ತನ್ನ ಸ್ವ ಸಾಮರ್ಥ್ಯ ಇಷ್ಟೊಂದು ಕೆಲಸ ಮಾಡಿಸಿದೆಯೆಂದರೆ ಆಶ್ಚರ್ಯವೇ ಸರಿ.
ಇಲ್ಲಿ ಹುಡುಗನ ಆಸಕ್ತಿ ಮತ್ತು ಹವ್ಯಾಸ ಮಹಾನ್ ವ್ಯಕ್ತಿಯ ಮೇಲೆ ಹಚ್ಚಿಕೊಂಡ ಗೌರವವನ್ನು ಹೊರ ಹೊಮ್ಮಿಸಿದೆ. ಅಷ್ಟಕ್ಕೂ ಈ 15ರ ಪೋರ “ವೆಲ್ ಟ್ಯಾಲೆಂಟೆಡ್ “. ಈಗಿಂದೀಗಲೇ ಕುಣಿತಭಜನೆ ಕಲಿಸೋ ಗುರು. ಮೈ ಕೈ ಹ್ಯಾಗೆಂದರೆ ಹಾಗೇ ಬಗ್ಗಿಸಿ ಪುಳಕಗೊಳಿಸೋ ನೃತ್ಯಪಟು, ಪರಂಪರೆಯ ಉಳಿಸೋ ಹವ್ಯಾಸಿ ಯಕ್ಷಗಾನ ಕಲಾವಿದ, ಒಳ್ಳೆಯ ಹಾಡುಗಾರ, ಲಯನ್ಸ್ ಕ್ಲಬ್ ವಿಟ್ಲದ ಎಳೆಯರ ವಿಭಾಗದ(ಲಿಯೋ ಕ್ಲಬ್ )ಅಧ್ಯಕ್ಷ, ಆರಾಧನಾ ಸಂಸ್ಥೆಯ ಪರ್ಮನೆಂಟ್ ಕ್ರಿಯಾಶೀಲ ಸದಸ್ಯ,ಕರ್ನಾಟಕ ಸಾಂಸ್ಕೃತಿಕ ಪರಿಷತ್ತು, ಸೃಷ್ಟಿ ಶಕ್ತಿ ಸಂಸ್ಥೆಯ ರಾಜ್ಯಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಕಲಿಕೆಯಲ್ಲಿ ಸಾಧಿಸಬೇಕೆಂಬ ಛಲ ಬಿಡದ ಒಂಬತ್ತನೇ ತರಗತಿಯ ನಮ್ಮ ವಿಠ್ಠಲ್ ಜೇಸಿ ಶಾಲಾ ವಿದ್ಯಾರ್ಥಿ. ಇವರ ಎಳೆತನದ ಬೆಳವಣಿಗೆಗೆ ಪೋಷಣೆಯಾಗಿ ನಿಂತವರು ಒಕ್ಕೆತ್ತೂರು ಮಾಡದ ನಿವಾಸಿ ತಂದೆ ಲೋಕೇಶ್ ಹಾಗೂ ತಾಯಿ ಲತಾ ಲೋಕೇಶ್. ಮಗುವೇ ನಿನ್ನ ಆದರ್ಶ ಹವ್ಯಾಸ ಎಳೆಯರಿಗೆ ಮಾದರಿಯಾಗಲಿ, ನಿನ್ನಾಸೆ ಈಡೇರಲಿ. ಈ ಹುಮ್ಮಸ್ಸು ಹೀಗೆ ಇರಲಿ.ನಿನ್ನ ಸಾಧನೆ ವಿಟ್ಲಕ್ಕೂ, ಶಾಲೆಗೂ ಹೆಮ್ಮೆ ತಂದಿದೆ ಹೀಗೆ ಸಾಗಲಿ ಬದುಕು.




