ಮಂಗಳೂರು: ಅನ್ಯಕೋಮಿನ ಜೋಡಿ ಮೇಲೆ ಅನೈತಿಕ ಪೊಲೀಸ್ ಗಿರಿ:
ನಾಲ್ವರು ಆರೋಪಿಗಳ ಬಂಧನ
ಮಂಗಳೂರು: ಖಾಸಗಿ ಬಸ್ಸಿನಲ್ಲಿ ಇಬ್ಬರು ವಿರುದ್ಧ ಕೋಮಿನ ಯುವಕ- ಯುವತಿ ಕುಳಿತಿದ್ದಾಗ ಬೇರೆ ಯುವಕರು ಸೇರಿ ದಬಾಯಿಸಿ, ಹಲ್ಲೆ ನಡೆಸಿದ ಘಟನೆಯ ವಿಡಿಯೋ ವೈರಲ್ ಆಗಿತ್ತು. ಘಟನೆ ಸಂಬಂಧಿಸಿ ಮಂಗಳೂರು ಪೊಲೀಸರು ಪಾಂಡೇಶ್ವರ ಠಾಣೆಯಲ್ಲಿ ಸುಮೊಟೋ ಪ್ರಕರಣ ದಾಖಲಿಸಿದ್ದರು. ಅದರಂತೆ, ನಾಲ್ವರು ಬಸ್ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶುಕ್ರವಾರ ಬೆಳಗ್ಗೆ ಘಟನೆ ನಡೆದಿದ್ದು, ಸಂಜೆ ವೇಳೆಗೆ ಮುಸ್ಲಿಂ ಯುವಕನೊಂದಿಗಿದ್ದ ಯುವತಿ ಎಂದು ವಿಡಿಯೋ ವೈರಲ್ ಆಗಿತ್ತು. ಮಂಗಳೂರಿನಿಂದ ಉಡುಪಿಗೆ ತೆರಳುತ್ತಿದ್ದ ಬಸ್ಸಿನಲ್ಲಿ ಜೊತೆಗೆ ಕುಳಿತಿದ್ದು, ಅಸಭ್ಯವಾಗಿ ವರ್ತಿಸಿದ್ದರಿಂದ ಸಾರ್ವಜನಿಕರು ಪ್ರಶ್ನೆ ಮಾಡಿದ್ದರು. ಆನಂತರ, ಉಡುಪಿ ಬಸ್ ನಿಲ್ದಾಣದಲ್ಲಿ ಇಬ್ಬರನ್ನೂ ತರಾಟೆಗೆತ್ತಿಕೊಂಡಿದ್ದಾರೆ ಎಂದು ವಿಡಿಯೋ ವೈರಲ್ ಮಾಡಲಾಗಿತ್ತು. ಆದರೆ, ಘಟನೆ ಬಗ್ಗೆ ಪೊಲೀಸರು ಅಲರ್ಟ್ ಆಗಿ, ಪರಿಶೀಲನೆ ನಡೆಸಿದ ಬಳಿಕ ಸದ್ರಿ ಘಟನೆ ಮಂಗಳೂರಿನ ಖಾಸಗಿ ಬಸ್ ನಿಲ್ದಾಣದಲ್ಲಿಯೇ ನಡೆದಿದ್ದಾಗಿ ದೃಢಪಟ್ಟಿದೆ.
ಯುವಕ ಶಿವಮೊಗ್ಗ ಮೂಲದವನಾಗಿದ್ದು, ಯುವತಿ ಉಡುಪಿ ಮೂಲದವಳಾಗಿದ್ದು, ಇಬ್ಬರೂ ಮಂಗಳೂರಿನ ಕಾಲೇಜು ಒಂದರಲ್ಲಿ ಸಹಪಾಠಿಗಳಾಗಿದ್ದರು. ಉಡುಪಿಗೆ ತೆರಳಲೆಂದು ಬಸ್ ನಿಲ್ದಾಣದಲ್ಲಿ ಬಸ್ಸಿನಲ್ಲಿ ಒಟ್ಟಿಗೆ ಕುಳಿತುಕೊಂಡಿದ್ದಾಗ, ಬಸ್ ಹೊರಡುವ ಮೊದಲೇ ಕೆಲವು ಬಸ್ ಸಿಬ್ಬಂದಿ ಮತ್ತು ಹಿಂದು ಸಂಘಟನೆಗೆ ಸೇರಿದ ಯುವಕರು ಸೇರಿ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ನಿನ್ನ ಐಡಿ ಕೊಡು, ನೀನು ಎಲ್ಲಿಯವನು, ಇವಳಿಗೇನು ಸಂಬಂಧ ಎಂದು ಪ್ರಶ್ನೆ ಮಾಡಿದ್ದಾರೆ. ಬಳಿಕ ಬಸ್ಸಿನಿಂದ ಇಳಿಸಿ, ಯುವಕ- ಯುವತಿಯನ್ನು ವಿಚಾರಣೆ ಮಾಡಿದ್ದಾರೆ. ಈ ವೇಳೆ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿತ್ತು. ಘಟನೆಯ ವಿಡಿಯೋವನ್ನು ಮೊಬೈಲಿನಲ್ಲಿ ತೆಗೆದು ಜಾಲತಾಣದಲ್ಲಿ ಬಿಡಲಾಗಿತ್ತು.
ವಿಡಿಯೋ ವೈರಲ್ ಆಗುತ್ತಿದ್ದಂತೆ, ನೈತಿಕ ಪೊಲೀಸ್ ಗಿರಿ ಎನ್ನುವ ನೆಲೆಯಲ್ಲಿ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಘಟನೆ ವೇಳೆ ಯುವಕರು ಎರಡು ಕೋಮುಗಳ ನಡುವೆ ದ್ವೇಷ ಬಿತ್ತುವ ರೀತಿ ವರ್ತಿಸಿದ ಕಾರಣ, ಪೊಲೀಸರು 153 ಎ ಮತ್ತು 354 ಸೆಕ್ಷನ್ ಅಡಿ ಸ್ವಯಂಪ್ರೇರಿತ ಕೇಸು ದಾಖಲಿಸಿದ್ದರು. ಖಾಸಗಿ ಬಸ್ ಸಿಬಂದಿಯಾಗಿರುವ ಪ್ರಕಾಶ್, ರಾಘವೇಂದ್ರ, ರಂಜಿತ್, ಪವನ್ ಎಂಬವರನ್ನು ಪೊಲೀಸರು ಬಂಧಿಸಿದ್ದು ಕೋರ್ಟಿಗೆ ಹಾಜರುಪಡಿಸಿದ್ದಾರೆ. ವಿಡಿಯೋದಲ್ಲಿದ್ದ ವ್ಯಕ್ತಿಗಳನ್ನು ಪತ್ತೆ ಮಾಡಿ, ಪೊಲೀಸರು ಕ್ರಮ ಜರುಗಿಸಿದ್ದಾರೆ.





