ಸಿಬಿಐ ಅಧಿಕಾರಿಗಳ ಹೆಸರಿನಲ್ಲಿ ಬೆದರಿಸಿ ಹಣ ಸುಲಿಗೆ; ನಾಲ್ವರು ಆರೋಪಿಗಳ ಬಂಧನ
ಬೆಂಗಳೂರು: ‘ಡ್ರಗ್ಸ್ ಪ್ರಕರಣದಲ್ಲಿ ಜೈಲಿಗೆ ಕಳುಹಿಸುತ್ತೇವೆ’ ಎಂಬುದಾಗಿ ಸಿಬಿಐ ಅಧಿಕಾರಿಗಳ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಕೇರಳದ ಅನಂತಕೃಷ್ಣನ್ (23), ಎ.ಎಸ್. ಪ್ರಮೋದ್ (42), ಆದರ್ಶ (22) ಹಾಗೂ ದೀಪಕ್ ಆರ್. ಚಂದ್ರ (37) ಬಂಧಿತರು.
ಎರಡು ಕಾರು, ಪಿಸ್ತೂಲ್, ಕೈ ಕೋಳ, ಲಾಠಿ, ಸಿಬಿಐ ಟ್ರಸ್ಟ್ ಹೆಸರಿನಲ್ಲಿದ್ದ ಗುರುತಿನ ಚೀಟಿಗಳು, ಬ್ಯಾಟನ್ ಹಾಗೂ 4 ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಹೆಸರಘಟ್ಟ ಮುಖ್ಯರಸ್ತೆಯ ಎಜಿಬಿ ಬಡಾವಣೆಯಲ್ಲಿ ವಿದ್ಯಾರ್ಥಿಯೊಬ್ಬರು ವಾಸವಿದ್ದಾರೆ. ಮೇ 27ರಂದು ರಾತ್ರಿ ಮನೆಗೆ ನುಗ್ಗಿದ್ದ ಆರೋಪಿಗಳು, ಸಿಬಿಐ ಅಧಿಕಾರಿಗಳು ಎಂಬುದಾಗಿ ಹೇಳಿ ಬೆದರಿಸಿದ್ದರು.
ತಾವು ತಂದಿದ್ದ ಗಾಂಜಾವನ್ನು ವಿದ್ಯಾರ್ಥಿ ಬಳಿ ಕೊಟ್ಟು ವಿಡಿಯೊ ಚಿತ್ರೀಕರಣ ಮಾಡಿದ್ದರು. ‘₹ 3 ಲಕ್ಷ ನೀಡಬೇಕು. ಇಲ್ಲದಿದ್ದರೆ, ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡುತ್ತೇವೆ. ಜೊತೆಗೆ, ನಿನ್ನನ್ನು ಬಂಧಿಸಿ ಜೈಲಿಗೆ ಕಳುಹಿಸುತ್ತೇವೆ’ ಎಂಬುದಾಗಿ ಬೆದರಿಸಿದ್ದರು’ ಎಂದು ತಿಳಿಸಿದರು.




