ಮಂಗಳೂರು: ಮತಯಂತ್ರದಲ್ಲಿ ತಾಂತ್ರಿಕ ದೋಷ: 2 ಗಂಟೆ ವಿಳಂಬವಾಗಿ ಆರಂಭವಾದ ಮತದಾನ
ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 20ರಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಎರಡೂವರೆ ತಾಸು ವಿಳಂಬವಾಗಿ ಮತದಾನ ಆರಂಭವಾಯಿತು.
ಬಿಜೈ ಚರ್ಚ್ ಆವರಣದಲ್ಲಿರುವ ಸೇಂಟ್ ಫ್ರಾನ್ಸಿಸ್ ಝೇವಿಯರ್ ಶಾಲೆಯ ಮತಗಟ್ಟೆ ಸಂಖ್ಯೆ 20ರಲ್ಲಿ ಮತದಾರರು ಬೆಳಿಗ್ಗೆ 7 ಗಂಟೆಯಿಂದಲೇ ಸರದಿಯಲ್ಲಿ ನಿಂತಿದ್ದರು. ಆರಂಭದಲ್ಲೇ ಮತಯಂತ್ರದಲ್ಲಿ ದೋಷ ಕಂಡುಬಂತು.
ಮತಯಂತ್ರ ಬದಲಾಯಿಸಿ ಮತದಾನ ಆರಂಭ ಆಗುವ ವೇಳೆಗೆ 9.30 ಗಂಟೆ ದಾಟಿತ್ತು. 100ಕ್ಕೂ ಹೆಚ್ಚು ಜನರು ತಮ್ಮ ಹಕ್ಕು ಚಲಾಯಿಸಲು ಸರದಿಯಲ್ಲಿ ನಿಂತು ಕಾಯಬೇಕಾಯಿತು ಎಂದು ಮತ ಚಲಾಯಿಸಲು ಬಂದಿದ್ದ ಮತದಾರರೊಬ್ಬರು ಪ್ರತಿಕ್ರಿಯಿಸಿದರು.