ಮನೆಗೆ ನುಗ್ಗಿ ಮಹಿಳೆಯ ಹತ್ಯೆ

ಬೆಂಗಳೂರು: ಕೊಡಿಗೇಹಳ್ಳಿ ಠಾಣೆ ವ್ಯಾಪ್ತಿಯಲ್ಲಿರುವ ಮನೆಯೊಂದರಲ್ಲಿ ಎಂ.ಶೋಭಾ (48) ಎಂಬುವವರನ್ನು ಹತ್ಯೆ ಮಾಡಿ ಚಿನ್ನಾಭರಣ ದೋಚಲಾಗಿದ್ದು, ಪರಿಚಯಸ್ಥರೇ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದೆ.
‘ಸ್ಥಳೀಯ ಗಣೇಶನಗರದ ಶೋಭಾ, ವಾಹನ ಚಾಲನಾ ತರಬೇತಿ ಶಾಲೆ ನಡೆಸುತ್ತಿದ್ದರು. ಎರಡನೇ ಮಗಳ ಜೊತೆ ವಾಸವಿದ್ದರು. ಮಗಳು ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಶೋಭಾ ಅವರ ಮಾಂಗಲ್ಯ ಸರ, ಚಿನ್ನದ ಸರ, ಮೊಬೈಲ್ ಅನ್ನು ದೋಚಿರುವ ದುಷ್ಕರ್ಮಿಗಳು, ಮನೆ ಎದುರು ಕಾರಿನ ಸಮೇತ ಪರಾರಿಯಾಗಿದ್ದಾರೆ. ಪರಿಚಯಸ್ಥರೇ ಕೃತ್ಯ ಎಸಗಿರುವ ಶಂಕೆ ಇದೆ. ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದು ತಿಳಿಸಿದರು.