ಕಾಸರಗೋಡು: ನಾಲ್ಕು ತಿಂಗಳ ಮಗುವನ್ನು ಹತ್ಯೆಗೈದು, ಕೈ ಕತ್ತರಿಸಿ ಆತ್ಮಹತ್ಯೆಗೆ ಶರಣಾದ ಮಹಿಳೆ
ಕಾಸರಗೋಡು: ನಾಲ್ಕು ತಿಂಗಳ ಹೆಣ್ಣು ಮಗುವನ್ನು ಕೊಲೆಗೈದು ತಾಯಿ ತನ್ನ ಕೈಯ ನರವನ್ನು ಕತ್ತರಿಸಿಕೊಂಡು ಬಳಿಕ ನೇಣು ಬಿಗಿದು ಆತ್ಮಹತ್ಯೆಗೈದ ದಾರುಣ ಘಟನೆ ಕಾಸರಗೋಡಿನ ಮುಳ್ಳೇರಿಯಾದಲ್ಲಿ ನಡೆದಿದೆ.
ಮೂಲತಃ ಇಡುಕ್ಕಿ ಜಿಲ್ಲೆಯ ತೊಡುಪುಳ ನಿವಾಸಿ ಶರತ್ ಅವರ ಪತ್ನಿ ಬಿಂದು (28) ಆತ್ಮಹತ್ಯೆ ಮಾಡಿಕೊಂಡವರು. ಈಕೆಯ ಗಂಡ ಶರತ್ ವಿದೇಶದಲ್ಲಿ ಉದ್ಯೋಗದಲ್ಲಿದ್ದು ಇವರಿಗೆ ನಾಲ್ಕು ತಿಂಗಳ ಹೆಣ್ಣು ಮಗುವಿತ್ತು. ಮಗುವನ್ನು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬಿಂದು ಇಡುಕ್ಕಿ ಜಿಲ್ಲೆಯ ತೊಡುಪುಳದ ಪತಿಯ ಮನೆಯಿಂದ ಪುತ್ರಿ ಶ್ರೀನಂದಾ ಮತ್ತು ಪುತ್ರ ಶ್ರೀಹರಿಯೊಂದಿಗೆ ಮಾ.31ರಂದು ಕಾಸರಗೋಡು ಜಿಲ್ಲೆಯ ಮುಳಿಯಾರು ಬಳಿಯ ಕೋಪಾಳಕೊಚ್ಚಿ ಎಂಬಲ್ಲಿಗೆ ಸಂಬಂಧಿಕರ ಮನೆಗೆ ಬಂದಿದ್ದರು.
ಎ.5ರಂದು ಮಧ್ಯಾಹ್ನ ಬಿಂದು ಮನೆಯ ಪಕ್ಕದ ಮರದಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೈಯ ನರ ಕತ್ತರಿಸಲ್ಪಟ್ಟು ರಕ್ತ ಸೋರುತ್ತಿತ್ತು. ಇದೇ ವೇಳೆ ನಾಲ್ಕು ತಿಂಗಳ ಮಗು ಶ್ರೀನಂದಾ ಕೊಠಡಿಯಲ್ಲಿ ಗಂಭೀರ ಸ್ಥಿತಿಯಲ್ಲಿ ಕಂಡುಬಂದಿತ್ತು. ಮನೆಯವರು ಕೂಡಲೇ ಮಗುವನ್ನು ಚೆಂಗಳ ಸಹಕಾರಿ ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ.
ಬಿಂದು ಮತ್ತು ಶರತ್ ಅವರ ವಿವಾಹ ಆರು ವರ್ಷಗಳ ಹಿಂದೆ ನಡೆದಿತ್ತು. ಕಾಸರಗೋಡು ಡಿವೈಎಸ್‌ಪಿ ಜಯನ್ ಡೊಮಿನಿಕ್ ಹಾಗೂ ಆದೂರು ಪೊಲೀಸ್ ಇನ್‌ಸ್ಪೆಕ್ಟರ್ ಸಂಜಯ್ ಕುಮಾರ್ ಸ್ಥಳಕ್ಕಾಗಮಿಸಿ ತನಿಖೆ ನಡೆಸಿದ್ದು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದೆ. ಸಾವಿಗೆ ಕಾರಣ ಇನ್ನಷ್ಟೇ ತಿಳಿಯ ಬೇಕಿದ್ದು, ಪತಿಯ ಮೇಲಿನ ಸಿಟ್ಟಿನಲ್ಲಿ ಪತ್ನಿ ಮಗುವನ್ನು ಉಸಿರುಗಟ್ಟಿಸಿ ಕೊಂದು ಸಾವಿಗೆ ಶರಣಾದ ಶಂಕೆ ವ್ಯಕ್ತವಾಗಿದೆ.






