ನರಹಂತಕ ಪ್ರವೀಣ್ ಚೌಗುಲೆಯನ್ನು ಕೋರ್ಟ್ ಗೆ ಹಾಜರುಪಡಿಸುವ ವೇಳೆ ಮದ್ಯ ಸೇವಿಸಿದ್ದ ಪಿಎಸ್ಸೈ: ಶಿಸ್ತು ಕ್ರಮಕ್ಕೆ ಎಸ್ಪಿ ಸೂಚನೆ

ಉಡುಪಿಯ ನೇಜಾರದಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆಯನ್ನು ಪೊಲೀಸರು ಬಿಗಿ ಭದ್ರತೆಯಲ್ಲಿ ನಿನ್ನೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಅಧಿಕಾರಿಯೊಬ್ಬರು ಮದ್ಯ ಸೇವಿಸಿ ಕರ್ತವ್ಯ ನಿರ್ವಹಿಸಿದ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿದ್ದ ಪ್ರವೀಣ್ ಚೌಗುಲೆಯನ್ನು ನ್ಯಾಯಾಲಯಕ್ಕೆ ಕರೆ ತರುವ ಭದ್ರತೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ಬೆಂಗಳೂರಿನ ಮೀಸಲು ಪೊಲೀಸ್ ವಿಭಾಗದ ಸಬ್ ಇನ್‌ಸ್ಪೆಕ್ಟರ್ ಮದ್ಯ ಸೇವಿಸಿ ಮಾಧ್ಯಮದ ಪ್ರತಿನಿಧಿಗಳು ಹಾಗೂ ಸಾರ್ವಜನಿಕರೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದಾರೆಂದು ಹೇಳಲಾಗುತ್ತಿದೆ.
ಈ ಬಗ್ಗೆ ಸ್ಥಳದಲ್ಲಿದ್ದವರು ಉಡುಪಿ ಎಸ್ಪಿಯ ಗಮನಕ್ಕೆ ತಂದಿದ್ದು, ಶಿಸ್ತು ಕ್ರಮಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತದೆ ಎಂದು ಉಡುಪಿ ಪೊಲೀಸ್ ಅಧೀಕ್ಷಕ ಡಾ. ಕೆ. ಅರುಣ್ ಅವರು ಹೇಳಿದ್ದಾರೆ.