ಸರೋಜಿನಿಯಕ್ಕನ ಮಗನ.ಮದುವೆ ಪ್ರಯುಕ್ತ ಮೊಂಟೆಪದವು ಮಸೀದಿಯಲ್ಲಿ ಇಫ್ತಾರ್…!: ಸೌಹಾರ್ದದ ವಿವಾಹಕ್ಕೆ ಸ್ಪೀಕರ್ ಯು.ಟಿ.ಖಾದರ್ ಸಹಿತ ಗಣ್ಯರಿಂದ ಶುಭಾಷಯ
ಬಂಟ್ವಾಳ: ಪರಿಶಿಷ್ಟ ಪಂಗಡಕ್ಕೆ ಸೇರಿರುವ ಶ್ರೀಮತಿ ಸರೋಜಿನಿ ಅವರು ಮಂಜನಾಡಿ ಗ್ರಾಮ ಪಂಚಾಯತಿನ ಅಧ್ಯಕ್ಷರು. ಮೊಂಟೆಪದವು ಮಸೀದಿಗೆ ತಾಗಿಕೊಂಡೇ ಸರೋಜಿನಿಯಕ್ಕನ ಮನೆ ಇದೆ. ನಿನ್ನೆ ನಡೆದ ಅವರ ಪುತ್ರನ ಮದುವೆ ಸಾಮರಸ್ಯದಿಂದ ಕೂಡಿತ್ತು. ಅರ್ಥಪೂರ್ಣ ಸಮಾರಂಭಕ್ಕೆ ಸ್ಪೀಕರ್ ಯು.ಟಿ.ಖಾದರ್ ಸಹಿತ ಗಣ್ಯರು ಸಾಕ್ಷಿಯಾದರು.
ಮದುವೆ ಮುನ್ನಾ ದಿನ ಮೆಹಂದಿಯನ್ನು ರಂಝಾನ್ ಪ್ರಾರ್ಥನೆಗೆ ಅಡಚಣೆಯಾಗಬಾರದೆಂದು ರಾತ್ರಿ 09:30ರ ನಂತರ ಆಯೋಜಿಸಿದ ಸರೋಜಿನಿಯಕ್ಕ ಅವರ ವಠಾರದಲ್ಲಿರುವ ಮುಸ್ಲಿಂ ಬಾಂಧವರ ಮನೆಗಳ ಸದಸ್ಯರಿಗೆ ಮದುವೆ ವಸ್ತ್ರವನ್ನು ಕೊಡುಗೆಯಾಗಿ ನೀಡಿ ಸಂಭ್ರಮಿಸಿದರು. ಮಗನ ಮೆಹಂದಿ ದಿನದಂದು ಮೊಂಟೆಪದವು ಮಸೀದಿಯಲ್ಲಿ ಮುಸ್ಲಿಂ ವೃತಧಾರಿಗಳಿಗೆ ಸೌಹಾರ್ದ ಇಫ್ತಾರ್ ಕೂಟವನ್ನು ಏರ್ಪಡಿಸಿ ಮದುವೆ ಔತಣದಲ್ಲೂ ಹೊಸ ಭಾಷ್ಯ ಬರೆದರು. ಮಸೀದಿಯಲ್ಲಿ ರಂಝಾನ್ ತಿಂಗಳ ತರಾವೀಹ್ ನಮಾಝ್ ಬಳಿಕ ಧರ್ಮಗುರುಗಳು ಸರೋಜಿನಿಯಕ್ಕನ ಮನೆಯವರಿಗೆ ಮತ್ತು ವಧೂವರರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
“ಮಗನ ಮದುವೆ ದಿನ ನಿಗದಿ ಮಾಡುವಾಗ ರಂಝಾನ್ ನೆನಪಿರಲಿಲ್ಲ. ಗೊತ್ತಿದ್ದರೆ ದಿನಾಂಕ ಮುಂದೂಡುತ್ತಿದ್ದೆ” ಎಂದು ಸರೋಜಿನಿಯಕ್ಕ ಹೇಳಿದರು. “ಇಂತಹ ವಾತಾವರಣ ಗ್ರಾಮೀಣ ಪ್ರದೇಶದಲ್ಲಿ ಜೀವಂತವಾಗಿದೆ. ಜಾತಿ ಧರ್ಮದ ಬೇಧವಿಲ್ಲದೇ ಎಲ್ಲರೂ ಬೆರೆತು ಬಾಳುವ ಸನ್ನಿವೇಶ ನೋಡಲು ಕಣ್ಣಿಗೆ ಹಬ್ಬ. ಹಿಂದೂ, ಮುಸ್ಲಿಂ, ಕ್ರೈಸ್ತರೆಲ್ಲರೂ ಜಾತಿಯ ಗೊಡವೆ ಬಿಟ್ಟು ಇಂತಹ ಆದರ್ಶ ಸಮಾರಂಭಗಳನ್ನು ಆಚರಿಸಬೇಕು. ಪರಸ್ಪರ ಧರ್ಮಗಳನ್ನು ಅರಿತು ಬಾಳಬೇಕು” ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.




