March 17, 2026

ವಿಟ್ಲದ ಬಾಂಧವ್ಯವನ್ನು ಗಟ್ಟಿಗೊಳಿಸಿದ ವಿ.ಫೌಂಡೇಶನ್ ಇಫ್ತಾರ್: ಲೇಖನ ರಶೀದ್ ವಿಟ್ಲ

0
image_editor_output_image-1674382316-1711299923059

ಬಹುಷಃ ಇಂತಹ ಒಂದು ಇಫ್ತಾರ್ ಸಮಾರಂಭ ಅಪರೂಪ ಎನ್ನಬಹುದು. ವಿಟ್ಲದ “ವಿ.ಫೌಂಡೇಶನ್” (V.FOUNDATION) ಯುವಕರು ಸಾವಿರಾರು ಉಪವಾಸಿಗರನ್ನು ಸೇರಿಸಿ ವಿಟ್ಲದ ವಿ.ಎಚ್. ಕಾಂಪ್ಲೆಕ್ಸ್ ನಲ್ಲಿ ಇಂದು ಹಮ್ಮಿಕೊಂಡ ಸೌಹಾರ್ದ ಇಫ್ತಾರ್ ಸಡಗರ, ಸಂಭ್ರಮದ ವಾತಾವರಣಕ್ಕೆ ಸಾಕ್ಷಿಯಾಯಿತು. ಜೊತೆಗೆ ಸಹೋದರ ಧರ್ಮದ ಸ್ನೇಹಿತರೂ ಇಫ್ತಾರ್ ಸರತಿ ಸಾಲಲ್ಲಿ ಕುಳಿತು ಕರ್ಜೂರ, ನೀರು ಸೇವಿಸಿದರು. ಫ್ರೂಟ್ಸ್, ಕರಿದ ತಿಂಡಿ, ಜ್ಯೂಸ್ ಕುಡಿದರು. ಬಿರಿಯಾನಿ ಪ್ಯಾಕ್ ಪಡೆದರು. ಮಗರಿಬ್ ಅಝಾನ್ ಗೆ ಮೌನವಾಗಿ ಗೌರವ ಸೂಚಿಸಿದರು.

ಬಹುತೇಕ ಮುಸ್ಲಿಂ ವೃತಧಾರಿಗಳೇ ಇದ್ದರೂ ಸಹೋದರ ಧರ್ಮದ ಹಿಂದೂ, ಕ್ರೈಸ್ತ ಬಾಂಧವರು ಆಗಮಿಸಿ ಪರಸ್ಪರ ರಂಝಾನ್ ನ ಶುಭಾಷಯ ಕೋರಿದರು. ವಿಟ್ಲದ ಪುತ್ತೂರು ರಸ್ತೆಯಲ್ಲಿರುವ ವಿ.ಎಚ್. ಕಾಂಪ್ಲೆಕ್ಸ್ ನಲ್ಲಿ ಕಿಕ್ಕಿರಿದು ತುಂಬಿದ ಜನರಿಗೆ ಸ್ಥಳಾವಕಾಶ ಸಾಕಾಗದೆ ಎದುರಿಗಿರುವ ಸ್ಮಾರ್ಟ್ ಸಿಟಿ ಪಾರ್ಕಿಂಗ್ ನಲ್ಲಿ ಪ್ಲಾಸ್ಟಿಕ್ ಹಾಸಿ ಇಫ್ತಾರ್ ವ್ಯವಸ್ಥೆ ಮಾಡಲಾಗಿತ್ತು. ವಿ.ಫೌಂಡೇಶನ್ ಯುವಕರ ಸ್ಪೂರ್ತಿ, ಟೀಮ್ ವರ್ಕ್ ಇಂದಿನ ಇಫ್ತಾರ್ ಕೂಟದ ಹೈಲೈಟ್. ನಾಲ್ಕು ವರ್ಷದ ಹಿಂದೆ ಹುಟ್ಟಿಕೊಂಡ ವಿ.ಫೌಂಡೇಶನ್ ಅಂದೊಮ್ಮೆ ಇಫ್ತಾರ್ ಕೂಟ ಮಾಡಿತ್ತು. ಆದರೆ ಅಂದು ಇಂದಿನಷ್ಟು ಗೌಜಿ ಇಲ್ಲದಿದ್ದರೂ ವಿ.ಎಚ್. ಕಾಂಪ್ಲೆಕ್ಸ್ ಸಂಪೂರ್ಣ ತುಂಬಿದ್ದು ನೆನಪಿದೆ. ಆದರೆ ಇಂದು ಸಾವಿರಕ್ಕೂ ಅಧಿಕ ಜನರು ಭಾಗವಹಿಸಿ ವಿ.ಫೌಡೇಶನ್ ನ ಆತಿಥ್ಯ ಸ್ವೀಕರಿಸಿ ಕೃತಾರ್ಥರಾದರು.

ಒಂದು ಸುಸಜ್ಜಿತ ಮತ್ತು ಸಾಮರಸ್ಯದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಖುಷಿ ನೀಡಿತು. ಟೀಮ್ ವರ್ಕ್ ವರ್ಕೌಟ್ ಆಯಿತು. ಒಂದು ರೀತಿಯಲ್ಲಿ ವಿಟ್ಲದ ಬಾಂಧವ್ಯವನ್ನು ಗಟ್ಟಿಗೊಳಿಸಿತು. ವೃತದ ಮಹತ್ವ ಮತ್ತು ಇಫ್ತಾರಿನ ಪರಿಚಯವನ್ನು ಸಹೋದರ ಧರ್ಮದ ಅತಿಥಿಗಳಿಗೂ ತೋರಿಸಿಕೊಟ್ಟ ವಿ.ಫೌಂಡೇಶನ್ ಯುವಕರಿಗೆ ಅಭಿನಂದನೆಗಳು. ಪ್ರತಿ ರಂಝಾನ್ ನಲ್ಲೂ ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ವಿಟ್ಲದ ಯುವಕರು ಆಯೋಜಿಸಲು ಸೃಷ್ಟಿಕರ್ತನ ಅನುಗ್ರಹ ಇರಲೆಂಬುವುದು ಹಾರೈಕೆ.
-ರಶೀದ್ ವಿಟ್ಲ.

Leave a Reply

Your email address will not be published. Required fields are marked *

You may have missed

error: Content is protected !!