ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಮೂವರ ಕೊಲೆ ಪ್ರಕರಣ: 6 ಮಂದಿ ಆರೋಪಿಗಳ ವಶಕ್ಕೆ
ಮಂಗಳೂರು: ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45), ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56), ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಗುರುತಿಸಿದ್ದಾರೆ.
ಇನ್ನು ಮೂರು ಜನ ಮೃತರೆಲ್ಲಾ ನಕಲಿ ಚಿನ್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ ಪ್ಲಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.




