ವಿಟ್ಲ: ಉಡುಪಿ -ಕಾಸಗರಗೋಡು ವಿದ್ಯುತ್ ಮಾರ್ಗದ ವಿಚಾರ: ಮತ್ತೆ ಹೋರಾಟದ ವೇದಿಕೆ ಸಿದ್ಧಗೊಳಿಸಿದ ರೈತ ಸಂಘ
ವಿಟ್ಲ: ತಮಿಳುನಾಡು ಭಾಗದಲ್ಲಿ ವಿದ್ಯುತ್ ಪ್ರಸರಣ ಮಾರ್ಗವನ್ನು ನಿಷೇಧ ಮಾಡಿ ಮಣ್ಣಿನ ಒಳಗೆ ಹೋಗಬೇಕೆಂದು ಸರ್ಕಾರ ಆದೇಶವನ್ನು ಹೊರಡಿಸಿದೆ. ೪೦೦ ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗದಿಂದ ಹೊರ ಸೂಸುವ ವಿಕಿರಣದಿಂದ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುವ ಬಗ್ಗೆ ಆರೋಗ್ಯ ಇಲಾಖೆಯ ವರದಿ ಇದೆ. ಕೇಂದ್ರ ಸರ್ಕಾರದ ಯೋಜನೆಯಾಗಿರದೆ ಖಾಸಗೀ ಕಂಪನಿಗೆ ದುಡ್ಡು ಮಾಡುವುದಕ್ಕಾಗಿ ಕೃಷಿ ಹಾಳುಗೆಡವುದಕ್ಕೆ ನಾವು ಬಿಡುವುದಿಲ್ಲ. ಉಡುಪಿ – ಕಾಸಗರಗೋಡು ವಿದ್ಯುತ್ ಮಾರ್ಗದ ವಿಚಾರದಲ್ಲಿ ಮೂರುವರೆ ವರ್ಷಗಳಿಂದ ಹೋರಾಟವನ್ನು ಮಾಡಿಕೊಂಡು ಬರಲಾಗುತ್ತಿದ್ದು, ಮುಂದೆಯೂ ನಡೆಸಿಕೊಂಡು ಹೋಗಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಹೇಳಿದರು.
ಅವರು ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರೈತರ ಕೃಷಿ ಜಮೀನನ್ನು ಬಿಟ್ಟು ಹೆದ್ದಾರಿಯ ಬದಿಯಲ್ಲಿ ಅಥವಾ ಸಮುದ್ರದ ಬದಿಯಲ್ಲಿ ತೆಗೆದುಕೊಂಡು ಹೋಗುವ ಕಾರ್ಯವನ್ನು ಮಾಡಲು ಎಂಬ ಬೇಡಿಕೆಯನ್ನು ಇಡಲಾಗಿದೆ. ಈ ಬಗ್ಗೆ ಕರ್ನಾಟಕ ಮುಖ್ಯಮಂತ್ರಿಗಳನ್ನು ಬೇಟಿ ಮಾಡಿ ಮನವಿಸಲ್ಲಿಸಲಾಗಿದ್ದು, ಪರ್ಯಾಯ ವ್ಯವಸ್ಥೆಯನ್ನು ನೋಡಲಾಗುವುದು ಎಂದಿದ್ದಾರೆ. ಆದರೆ ಏಕಾಏಕಿ ಜಮೀನಿಗೆ ನುಗ್ಗಿ ಸರ್ವೇ ಮಾಡುವುದು, ಹೊಂಡ ತೆಗೆಯುವ ಕಾರ್ಯವನ್ನು ಮಾಡುತ್ತಿದ್ದಾರೆ. ಯಾವ ನ್ಯಾಯಾಲಯದಲ್ಲಿ ಪ್ರಕರಣವನ್ನು ಗೆದ್ದರೂ, ಜನತಾ ನ್ಯಾಯಾಲಯದಲ್ಲಿ ಗೆಲುವು ಸಾಧಿಸಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ರೈತರಿಗೆ ಜನತಾ ನ್ಯಾಯಾಲಯದಲ್ಲಿನ್ಯಾಯ ಒದಗಿಸಿ ಉಡುಪಿಯಿಂದ ಓಡಿಸುವ ಕೆಲಸವನ್ನು ರೈತಸಂಘ ಮಾಡಲಿದೆ. ಕೆಲವು ನಿವೃತ್ತ ಪೊಲೀಸ್ ಅಧಿಕಾರಿಗಳು ಕಂಪನಿಯ ಜತೆಗೆ ಸೇರಿಕೊಂಡು ರೈತರ ಮನೆಗೆ ತೆರಳಿ ಹೆದರಿಸುವ ಕಾರ್ಯ ಮಾಡುತ್ತಿರುವುದು ಕಂಡು ಬಂದಿದೆ. ದುಡ್ಡಿನ ಆಮಿಶವನ್ನು ತೋರಿಸಿ ಜಾಲದಲ್ಲಿ ಸಿಲುಕಿಸಲಾಗುತ್ತಿದೆ. ಕೆಲವು ಭಾಗದಲ್ಲಿ ರಾಜಕಾರಣಿಗಳು ಅವರ ಜತೆಗೆ ಶಾಮೀಲಾಗಿರುವ ಸಂಶಯಗಳಿಗೆ ಕಾರಣವಾಗಿದೆ. ೨೦೦ಲಕ್ಷ ಕೋಟಿ ಸಾಲ ಮಾಡಿದ್ದು ಬಿಟ್ಟರೆ ಅಭಿವೃದ್ಧಿ ಎಲ್ಲಿ ಮಾಡಿದ್ದಾರೆ ಎಂಬುದನ್ನು ತೋರಿಸಲಿ ಎಂದು ತಿಳಿಸಿದರು.
ಉಡುಪಿ ಕಾಸರಗೋಡು ೪೦೦ ಕೆವಿ ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ ಮಾತನಾಡಿ ಕೆ.ಪಿ.ಟಿ.ಸಿ.ಎಲ್. ಇತ್ತೀಚೆಗೆ ಬಿಡುಗಡೆ ಮಾಡಿದ ವಿದ್ಯುತ್ ಮಾರ್ಗದ ನಕ್ಷೆಯಲ್ಲಿ ಉಡುಪಿ ಕಾಸರಗೋಡು ವಿದ್ಯುತ್ ಮಾರ್ಗದ ಗುರುತಿಲ್ಲ. ಇದರಿಂದ ಖಾಸಗೀ ಕಂಪನಿಯ ಯೋಜನೆ ಎಂಬುದು ಸ್ಪಷ್ಟವಾಗುತ್ತಿದೆ. ಕಂಪನಿಯ ಉದ್ದಾರ ಮುಖ್ಯವಲ್ಲ, ರೈತರ ಬದುಕಿನ ಬಗ್ಗೆ ಸರ್ಕಾರ ಯೋಜನೆ ಮಾಡಬೇಕಾಗಿದೆ. ಮೋದಿಯನ್ನು ಎದುರಿಗೆ ತಂದು ಕಂಪನಿಯ ಕೆಲಸವನ್ನು ನಡೆಸಲಾಗುತ್ತಿದೆ. ರೈತರಿಗೆ ದೂರವಾಣಿ ಕರೆ ಮಾಡಿ ದಾರಿ ತಪ್ಪಿಸುವ ಕೆಲಸವನ್ನು ತಕ್ಷಣ ಸ್ಥಗಿತ ಮಾಡಬೇಕು. ತಮಿಳುನಾಡಿನ ಮಾದರಿಯಲ್ಲಿ ಯಾಕೆ ಕರ್ನಾಟಕದಲ್ಲಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ರೈತ ಸಂಘದ ಜಿಲ್ಲಾ ಸಲಹೆಗಾರ ಮುರುವ ಮಹಾಬಲ ಭಟ್, ಸಂತ್ರಸ್ತ ರೈತರಾದ ಅಣ್ಣು ಗೌಡ, ರಾಬರ್ಟ್ ಮಸ್ಕರೇನಿಯಸ್, ಚಿತ್ತರಂಜನ್ ನೆಕ್ಕಿಲಾಡಿ ಮತ್ತಿತರರು ಉಪಸ್ಥಿತರಿದ್ದರು.





