ಉಳ್ಳಾಲ: ನಾಪತ್ತೆಯಾದ ಯುವಕನ ಮೃತದೇಹ ಪತ್ತೆ
ಉಳ್ಳಾಲ: ಕಳೆದ ಸೋಮವಾರದಿಂದ ಮನೆಯಿಂದ ನಾಪತ್ತೆಯಾಗಿದ್ದ ಸೋಮೇಶ್ವರದ ಯುವಕನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ.
ಉಳ್ಳಾಲ ತಾಲೂಕಿನ ಸೋಮೇಶ್ವರ ಮೂಡ ಬಡಾವಣೆ ನಿವಾಸಿ ಗೌತಮ್ ಎಮ್(30) ಮೃತ ಯುವಕ.
ಫೈನಾನ್ಸ್ ಸೀಸರ್ ಆಗಿದ್ದ ಗೌತಮ್ ಕಳೆದ ಸೋಮವಾರ ಸಂಜೆ ತೊಕ್ಕೊಟ್ಟಿನಲ್ಲಿ ನಡೆದಿದ್ದ ಬಬ್ಬುಸ್ವಾಮಿ ದೈವದ ಪುನರ್ ಪ್ರತಿಷ್ಠೆ, ಕಲಶಾಭಿಷೇಕದ ಹೊರೆಕಾಣಿಕೆಯಲ್ಲಿ ಭಾಗವಹಿಸಿ ಮನೆಗೆ ತೆರಳಿದ್ದ. ರಾತ್ರಿ ವೇಳೆ ಮನೆ ಮಂದಿಯಲ್ಲಿ ಕಿರಿಕ್ ಮಾಡಿದ್ದ ಗೌತಮ್ ಮನೆ ಬಿಟ್ಟು ತೆರಳಿದ್ದನಂತೆ. ಗೌತಮ್ ಮತ್ತೆ ಮರಳದ ಹಿನ್ನಲೆಯಲ್ಲಿ ಮರುದಿನ ಮನೆ ಮಂದಿ ಉಳ್ಳಾಲ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಇನ್ನು ನಿನ್ನೆ ಸಂಜೆ ವೇಳೆ ನೇತ್ರಾವತಿ ನದಿಯಲ್ಲಿ ಗೌತಮ್ ಶವವಾಗಿ ಪತ್ತೆಯಾಗಿದ್ದು ಪಾಂಡೇಶ್ವರ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಇಂದು ಮನೆ ಮಂದಿ ಮೃತದೇಹವನ್ನು ಗುರುತಿಸಿದ್ದು ಅವರ ಸಮಕ್ಷಮದಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಗೌತಮ್ ವಿವಾಹಿತನಾಗಿದ್ದು ವರುಷಗಳ ಹಿಂದೆಯೇ ಪತ್ನಿಯಿಂದ ವಿಚ್ಛೇದಿತನಾಗಿದ್ದ. ಕುಡಿತದ ಚಟ ಮೈಗೂಡಿಸಿದ್ದ ಗೌತಮ್ ಕ್ಷುಲ್ಲಕ ಕಾರಣಗಳಿಗೆ ಮನೆ ಮಂದಿಯಲ್ಲಿ ಕಿರಿಕ್ ಮಾಡುತ್ತಲೇ ಇದ್ದನಂತೆ.
ಮೃತ ಗೌತಮ್ ತಂದೆ, ತಾಯಿ, ಇಬ್ಬರು ಸಹೋದರರನ್ನು ಅಗಲಿದ್ದಾರೆ.”