April 21, 2024

ಸಂಸದೆ ಶೋಭಾ ಕರಂದ್ಲಾಜೆಗೆ ಟಿಕೆಟ್‌ ನೀಡದಂತೆ ಬಿಜೆಪಿ ಕಾರ್ಯಕರ್ತರಿಂದ ಕೇಂದ್ರಕ್ಕೆ ಪತ್ರ

0

ಚಿಕ್ಕ ಮಗಳೂರು: ಉಡುಪಿ – ಚಿಕ್ಕಮಗಳೂರು ಕ್ಷೇತ್ರದಿಂದ ಮೂರನೇ ಬಾರಿ ಸ್ಪರ್ಧಿಸುವುದಾಗಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿರುವ ಬೆನ್ನಲ್ಲೇ ‘ಗೋಬ್ಯಾಕ್ ಶೋಭಾ’ ಪತ್ರ ಅಭಿಯಾನ ಆರಂಭಿಸಿರುವ ಬಿಜೆಪಿ ಕಾರ್ಯಕರ್ತರು, ರಾಷ್ಟ್ರ ನಾಯಕರಿಗೆ ಪತ್ರ ರವಾನಿಸಿರುವ ಬಗ್ಗೆ ವರದಿಯಾಗಿದೆ.

ಲೋಕಸಭಾ ಚುನಾವಣೆಗೆ ಬರದ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳು ಸಂಚಾರ ನಡೆಸುತ್ತಿವೆ. ಟಿಕೆಟ್ ಆಕಾಂಕ್ಷಿಗಳು ಕೂಡ ಜಾಸ್ತಿಯಾಗಿದ್ದಾರೆ. ಈ ಬೆನ್ನಲ್ಲೇ ಚಿಕ್ಕಮಗಳೂರು ಜನತೆ ಈ ಬಾರಿ ಶೋಭಾ ಕರಂದ್ಲಾಜೆಯವರ ಸ್ಪರ್ಧೆಯನ್ನು ನಿರಾಕರಣೆ ಮಾಡಿದ್ದಾರೆ. ಈ ಸಂಬಂಧ ಪತ್ರ ಚಳುವಳಿ ಶುರು ಮಾಡಿದ್ದಾರೆ.

ಮಾನ್ಯ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೇ ನಾವೂ ಉಡುಪಿ, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತದಾರರು. ಈ ಕ್ಷೇತ್ರದಲ್ಲಿ ಕುಮಾರಿ ಶೋಭಾ ಕರಂದ್ಲಾಜೆ ಅವರು ಲೋಕಸಭಾ ಸದಸ್ಯರಾಗಿರುತ್ತಾರೆ. ಇಲ್ಲಿಯವರೆಗೂ ಎರಡು ಬಾರಿ ಗೆಲ್ಲಿಸಿದ್ದೇವೆ. ಎರಡು ಬಾರಿ ಸದಸ್ಯರಾಗಿದ್ದಾರೆ. ಈ ಬಾರಿ ನಮ್ಮ ಕ್ಷೇತ್ರದಿಂದ ಅವರಿಗೆ ಟಿಕೆಟ್ ಕೊಡಬಾರದೆಂದು ಮನವಿ ಮಾಡುತ್ತಿದ್ದೇವೆ. ನೊಂದ ಕಾರ್ಯಕರ್ತ ಎಂದು ಪತ್ರದಲ್ಲಿ ಬರೆದಿದ್ದಾರೆ. ಈ ಪತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಇನ್ನು ಪತ್ರಗಳನ್ನು ಹಂಚುತ್ತಿರುವ ಕಾರ್ಯಕರ್ತರು, ಪ್ರಧಾನಿ ಮೋದಿ ಹಾಗೂ ಜೆಪಿ ನಡ್ಡಾ ಹಾಗೂ ಅಮಿತ್ ಶಾ ಅವರಿಗೆ ಈ ಪತ್ರಗಳನ್ನು ತಲುಪಿಸಿದ್ದಾರೆ. ಹೊಸ ಮುಖಕ್ಕೆ ಟಿಕೆಟ್ ನೀಡಿ ಎಂದು ಮನವಿ ಮಾಡಿದ್ದಾರೆ. ಸದ್ಯ ಶೋಭಾ ಕರಂದ್ಲಾಜೆ ಅವರು ಕೇಂದ್ರ ಸಚಿವೆಯಾಗಿದ್ದಾರೆ. ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವುದು ಕಡಿಮೆ ಎನ್ನಲಾಗುತ್ತಿದೆ. ಹೀಗಾಗಿ ಈ ಬಾರಿ ಬೇರೆ ಯಾರಿಗಾದರೂ ಟಿಕೆಟ್ ನೀಡಿ ಎಂದು ಜನರೇ ಮನವಿ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!