ಮಂಗಳೂರು: ಕಾಂಗ್ರೆಸ್ ಸಮಾವೇಶಕ್ಕೆ ಮಲ್ಲಿಕಟ್ಟೆಯಲ್ಲಿ ಅಳವಡಿಸಲಾಗಿದ್ದ ಬ್ಯಾನರ್ ಹರಿದ ಕಿಡಿಗೇಡಿಗಳು
ಮಂಗಳೂರು: ಮಂಗಳೂರಿನ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ಅಳವಡಿಸಲಾಗಿದ್ದ ಬ್ಯಾನರ್ ಹರಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
ಎನ್‌ಎಸ್‌ಯುಐನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ಅವರು ಕಾಂಗ್ರೆಸ್ ಸಮಾವೇಶಕ್ಕೆ ಶುಭಕೋರಿ ಹಾಕಿದ್ದ ಬ್ಯಾನರನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ.
ಫೆ. 17ರಂದು ಮಂಗಳೂರಿನಲ್ಲಿ ರಾಜ್ಯ ಕಾಂಗ್ರೆಸ್ ಸಮಾವೇಶ ನಡೆಯಲಿದ್ದು, ಇದಕ್ಕೆ ಶುಭ ಕೋರಿ ಅವರು ಬ್ಯಾನರ್ ಹಾಕಿದ್ದು, ಇದನ್ನೇ ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಇದನ್ನು ತಿಳಿದ ಹಲವು ಕಾಂಗ್ರೆಸ್ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಹಾನ್ ಆಳ್ವಾ ಕೂಡಾ ಸ್ಥಳಕ್ಕೆ ಆಗಮಿಸಿ ಬ್ಯಾನರ್ ಹರಿದಿರುವುದನ್ನು ಖಂಡಿಸಿದ್ದಾರೆ. ಸ್ಥಳದಲ್ಲಿ ಹಲವು ಸಿಸಿ ಕ್ಯಾಮೆರಾಗಳಿದ್ದು , ಬ್ಯಾನರ್ ಹರಿದ ವ್ಯಕ್ತಿಗಳ ಗುರುತು ಪತ್ತೆಯಾದರೆ ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಸದ್ಯ ಬ್ಯಾನರ್ ಹರಿದಿರಲು ನಿಖರ ಕಾರಣ ಗೊತ್ತಾಗಿಲ್ಲವಾದರೂ ಇದು ಉದ್ದೇಶ ಪೂರ್ವಕವಾಗಿ ಮಾಡಿರುವ ಕೃತ್ಯವೋ ಅಥವಾ ಅಚಾತುರ್ಯವೋ ಎಂದು ಕಾಂಗ್ರೆಸ್ ಕಾರ್ಯಕರ್ತರಲ್ಲೇ ಅನುಮಾನ ಇದೆ.
ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದು ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಕೆ ನಡೆಯಲಿದ್ದು ಸ್ಥಳದ ಸುತ್ತಮುತ್ತಲಿನ ಸಿಸಿ ಟಿವಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸುಹಾನ್ ಆಳ್ವಾ ಕೂಡಾ ಈ ಬಗ್ಗೆ ಪ್ರತಿಕ್ರೀಯೆ ನೀಡಿದ್ದು, ಸಿಸಿ ಟಿವಿ ಪರಿಶೀಲನೆ ಮಾಡದೇ ಯಾವುದೇ ತೀರ್ಮಾನಕ್ಕೆ ಬರುವಂತಿಲ್ಲ.
ಇದು ಉದ್ದೇಶ ಪೂರ್ವಕ ಮಾಡಿದ ಕೃತ್ಯವೋ ಅಥವಾ ಅಚಾತುರ್ಯದಿಂದ ನಡೆದಿದೆಯೋ ಎಂಬುದು ಸಿಸಿ ಟಿವಿ ಪರಿಶೀಲನೆ ಬಳಿಕ ಗೊತ್ತಾಗಲಿದೆ. ಹಾಗಾಗಿ ಸದ್ಯ ಯಾರ ಮೇಲೂ ಗೂಬೆ ಕೂರಿಸುವ ವಿಚಾರ ಇಲ್ಲ . ಪೊಲೀಸರು ಪರಿಶೀಲನೆ ನಡೆಸಿದ ಬಳಿಕ ಸತ್ಯಾ ಸತ್ಯತೆ ಗೊತ್ತಾಗಲಿದೆ ಎಂದು ಹೇಳಿದ್ದಾರೆ.