ವಿಟ್ಲ: ಅಡ್ಯನಡ್ಕ ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ಭಾರೀ ಕಳವು ಪ್ರಕರಣ: ಕೋಟ್ಯಾಂತರ ರೂ. ಮೌಲ್ಯದ ನಗ ನಗದು ಕಳವು ಶಂಕೆ
ವಿಟ್ಲ: ಕರ್ನಾಟಕ ಬ್ಯಾಂಕಿನ ವಿಟ್ಲ ಸಮೀಪದ ಅಡ್ಯನಡ್ಕ ಶಾಖೆಯಲ್ಲಿ ಗುರುವಾರ ನಸುಕಿನ ಜಾವ ಭಾರೀ ಕಳ್ಳತನ ನಡೆದಿದ್ದು ಕೋಟ್ಯಾಂತರ ರೂಪಾಯಿ ಮೌಲ್ಯದ ನಗ ಹಾಗೂ ನಗದನ್ನು ದೋಚಿರುವ ಶಂಕೆ ವ್ಯಕ್ತವಾಗಿದೆ.
ಅಂದಾಜು ಪ್ರಕಾರ ರೂ 2 ರಿಂದ 3 ಕೋಟಿಯಷ್ಟು ಹಣ ಮತ್ತು ಬಂಗಾರ ಕಳ್ಳರ ಪಾಲಾಗಿದೆ. ಸುಮಾರು ಒಂದು ಕೋಟಿ ರೂಪಾಯಿಯಷ್ಟು ನಗದು ಹಾಗೂ ಅಂದಾಜು 1 ರಿಂದ 2 ಕೋಟಿಯಷ್ಟು ಚಿನ್ನಾಭರಣ ಕಳ್ಳತನವಾಗಿರುವುದಾಗಿ ಬ್ಯಾಂಕಿನ ಮೂಲಗಳು ತಿಳಿಸಿವೆ.
ಕೃತ್ಯವು ನಿನ್ನೆ ರಾತ್ರಿ 2.30ರಿಂದ ಬೆಳಗ್ಗಿನ ಜಾವ 4 ಗಂಟೆಯ ಸುಮಾರಿಗೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕರ್ನಾಟಕ ಬ್ಯಾಂಕಿನ ಅಡ್ಯನಡ್ಕ ಶಾಖೆಯು ಕಲ್ಲಡ್ಕ ಕಾಂಜ್ಞಾಗಾಡ್ ಅಂತರಾಜ್ಯ ಹೆದ್ದಾರಿಯ ಅಂಚಿನಲ್ಲಿದೆ. ಇಲ್ಲಿಂದ ಒಂದು ಕಿಮೀ ದೂರದಲ್ಲಿ ಸಾರಡ್ಕ ಚೆಕ್ ಪೋಸ್ಟ್ ಇದೆ.
ಕಳ್ಳತನ ಹೇಗೆ ?
ಬ್ಯಾಂಕಿನ ಹಿಂಬಾಗಲಿನ ಕಿಟಕಿ ಮುರಿದು ಒಳ ನುಗ್ಗಿದ್ದ ಕಳ್ಳರು ಗ್ಯಾಸ್ ಕಟ್ಟರ್ ಬಳಸಿ ಸೇಫ್ ಲಾಕರ್ ನ ಬಾಗಿಲು ತುಂಡರಿಸಿ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೇ ಕಳ್ಳತನದ ವೇಳೆ ಬ್ಯಾಂಕಿಗೆ ಆಳವಡಿಸಿದ ಸೆಕ್ಯೂರಿಟಿ ಅಲಾರಂ ಸೈರನ್ ಮಾಡದಿರುವುದು ಕುತೂಹಲ ಮೂಡಿಸಿದೆ. ಬ್ಯಾಂಕಿನ ಹಿಂಬದಿಯಲ್ಲಿರುವ ಅಂಗಳದಲ್ಲಿ ವಾಹನ ನಿಲ್ಲಿಸಿಕೃತ್ಯ ಎಸಗಿ, ಬಳಿಕ ನಗ ನಗದಿನ ಜತೆ ಎಸ್ಕೆಪ್ ಆಗಿರಬಹುದು ಎಂಬ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ .
ಇಂದು ಬೆಳಿಗ್ಗೆ 9.30 ರ ಸುಮಾರಿಗೆ ಬ್ಯಾಂಕ್ ಸಿಬ್ಬಂದಿಗಳು ಬ್ಯಾಂಕ್ ಗೆ ಬಂದ ವೇಳೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಸುಮಾರು 11 ಗಂಟೆ ಸುಮಾರಿಗೆ ವಿಟ್ಲ ಠಾಣಾ ಎಸೈ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಅದಕ್ಕೂ ಮೊದಲು ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದರು . ಸದ್ಯ ಬ್ಯಾಂಕ್ ಮುಂಭಾಗ ಕುತೂಹಲಿಗಳ ಗುಂಪು ಸೇರಿದ್ದು ಬ್ಯಾಂಕ್ ಅವರಣವನ್ನು ಪೊಲೀಸರು ಸೀಲ್ ಮಾಡಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳ ಇನ್ನಷ್ಟೇ ಘಟನಾ ಸ್ಥಳಕ್ಕೆ ಬರಬೇಕಿದೆ.
ಸಿಸಿಟಿವಿ
ಬ್ಯಾಂಕ್ ಒಳಗಡೆಯ ಸಿಸಿಟಿವಿಯಲ್ಲಿ ಕೃತ್ಯ ಸೆರೆಯಾಗಿದೆಯೇ ಎಂಬ ಮಾಹಿತಿ ಲಭಿಸಿಲ್ಲ . ಈಗಾಗಲೇ ಪೊಲೀಸರು ಅದನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಬ್ಯಾಂಕ್ ಮುಂಭಾಗ ಹಾಗೂ ಹಿಂಭಾಗ ಅಥಾವ ಹೆದ್ದಾರಿಯಲ್ಲಿ ಯಾವುದೇ ಸಿಸಿಟಿವಿ ಅಳವಡಿಸಿದಿರುವುದು ತನಿಖೆಗೆ ತೊಡಕಾಗಿದೆ. ಅಕ್ಕಪಕ್ಕದ ಅಂಗಡಿಗಳಲ್ಲಿ ಅಳವಡಿಸರುವ ಸಿಸಿಟಿವಿಯಲ್ಲಿ ವಾಹನದ ಚಲನವಲನದ ದೃಶ್ಯಗಳು ಸೆರೆಯಾಗಿರುವ ಸಾಧ್ಯತೆಯಿದೆ.
ಸಾರಡ್ಕ ಚೆಕ್ ಪೋಸ್ಟ್ – ಊಟಕ್ಕಿಲ್ಲದ ಉಪ್ಪಿನಕಾಯಿ
ಕೇರಳದ ಕಾಸರಗೋಡು ಭಾಗದಿಂದ ಬಂದ ಕಳ್ಳರು ಕೃತ್ಯ ಎಸಗಿ ಪುನ: ಕೇರಳಕ್ಕೆ ಎಸ್ಕೆಪ್ ಆಗಿರಬಹುದೆಂಬ ದಟ್ಟ ವದಂತಿ ಸ್ಥಳೀಯವಾಗಿ ಹಬ್ಬಿದೆ. ಇದು ನಿಜವಾದರೇ , ಕಳ್ಳರು ಸಾರಡ್ಕ ಚೆಕ್ ಪೋಸ್ಟ್ ನ ಮೂಲಕವೇ ರಾಜರೋಷವಾಗಿ ಆಗಮಿಸಿ , ಅದೇ ಮಾರ್ಗದಲ್ಲಿ ನಿರ್ಭಿತಿಯಿಂದ ಪರಾರಿಯಾಗಿರುವ ಸಾಧ್ಯತೆಯೇ ಅಧಿಕ . ವರ್ಷಗಳ ಹಿಂದೆ ಇಲ್ಲಿಯೇ ಸಮೀಪದ ಕುದ್ದು ಪದವು ಪೆಟ್ರೋಲ್ ಬಂಕ್ ನಲ್ಲಿ ದರೋಡೆ ಕೃತ್ಯ ನಡೆದಿತ್ತು. ಆ ವೇಳೆಯೂ ಇದೇ ಸಾರಡ್ಕ ಚೆಕ್ ಫೋಸ್ಟ್ ನ ಮೂಲಕ ಬಂದ ದರೋಡೆಕೋರರು ಕೃತ ಎಸಗಿ ಅದೇ ಮಾರ್ಗದಲ್ಲಿ ಪರಾರಿಯಾಗಿದ್ದರು. ಆಗ ಪೊಲೀಸರು ದರೋಡೆಕೋರರು ಸಾರಡ್ಕ ಚೆಕ್ ಫೊಸ್ಟ್ ಮೂಲಕ ಬಂದಿಲ್ಲ ಎಂದು ವಾದಿಸಿದರಾದರೂ, ಬಳಿಕ ದೊರೆತ ಸಿಸಿಟಿವಿ ಫೋಟೇಜ್ ಸತ್ಯ ಹೊರಗೆಡವಿತ್ತು. ಸಾರಡ್ಕ ಚೆಕ್ ಫೋಸ್ಟ್ ನಲ್ಲಿ ರಾತ್ರಿ ವೇಳೆ ಸಮರ್ಪಕ ಗಸ್ತು ವ್ಯವಸ್ಥೆ ಇರುವುದಿಲ್ಲ ಎಂಬ ಆರೋಪ ಇಂದು ನಿನ್ನೆಯದಲ್ಲ. ಈ ಕುರಿತು ಹಲವು ಮಾದ್ಯಮ ವರದಿಗಳು ಪ್ರಕಟಗೊಂಡಿದ್ದರೂ ಹಿರಿಯ ಅಧಿಕಾರಿಗಳ ಅಸಡ್ಡೆ , ಇಂತಹ ಅಪರಾಧ ಕೃತಯಗಳಿಗೆ ಪ್ರೋತ್ಸಾಹ ಕೊಡುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.




