ಬಂಟ್ವಾಳ: ಹರಕೆಯ ಕೋಲ ಸೇವೆ ನೀಡಿದ ಯು.ಟಿ.ಖಾದರ್ ವಿರುದ್ಧ ಆಕ್ರೋಶ
ಬಂಟ್ವಾಳ: ತುಳುನಾಡಿನ ಅತ್ಯಂತ ಕಾರಣೀಕ ಕ್ಷೇತ್ರ ವಾಗಿರುವ ಪಣೋಲಿಬೈಲು ಕ್ಷೇತ್ರದಲ್ಲಿ ಹರಕೆಯ ಕೋಲ ಸೇವೆ ನೀಡಿದ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ವಿರುದ್ದ ಸಮಾಜದ ಮುಖಂಡರಿಂದ ತೀವ್ರವಾದ ಆಕ್ಷೇಪಗಳು ಕೇಳಿ ಬಂದಿವೆ.

ಇಷ್ಟಾರ್ಥಸಿದ್ಧಿಗಾಗಿ ವಿಧಾನಸಭಾಧ್ಯಕ್ಷರಾದ ಯು.ಟಿ ಖಾದರ್ ಬಂಟ್ವಾಳದ ಶ್ರೀ ಕ್ಷೇತ್ರ ಪನೋಲಿಬೈಲ್‌ನಲ್ಲಿ ತುಳುನಾಡಿನ ಕಾರ್ಣಿಕ ದೈವಗಳಾದ ಕಲ್ಲುರ್ಟಿ ಕಲ್ಕುಡ ದೈವಗಳ ಹರಕೆ ಕೋಲವನ್ನು ಫೆ.4 ರಂದು ಆದಿತ್ಯವಾರ ರಾತ್ರಿ ಕ್ಷೇತ್ರದಲ್ಲಿ ನೆರವೇರಿಸಿದ್ದಾರೆ. ಆದರೆ ಇದೀಗ ಮುಸ್ಲಿಂ ನಾಯಕರಿಂದ ಖಾದರ್ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಟ್ವಿಟ್ಟರ್ ಶುರುವಾಗಿದೆ.
ಸ್ಥಳೀಯ ಮುಖಂಡರೊಂದಿಗೆ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗಿದ್ದ ಖಾದರ್, ಸಂಪ್ರದಾಯ ಬದ್ಧವಾಗಿ ಕೋಲ ನೆರವೇರಿಸಿ ಕಲ್ಲುರ್ಟಿ- ಕಲ್ಕುಡ ದೈವಗಳ ಆಶೀರ್ವಾದ ಪಡೆದಿದ್ದಾರೆ. ಆದ್ರೆ ಹರಕೆ ಕೋಲ ನೆರವೇರಿಸಿದ ಯು.ಟಿ ಖಾದರ್ ವಿರುದ್ಧ ಮುಸ್ಲಿಂ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ.
ಮುಸ್ಲಿಂ ಧಾರ್ಮಿಕ ಮುಖಂಡ ಸಾಲೆತ್ತೂರು ಫೈಝಿ ಎಂಬುವವರು ಯು.ಟಿ. ಖಾದರ್ ಬಗ್ಗೆ ಆಕ್ಷೇಪಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ‘ಕೊರಗಜ್ಜನ ಭಕ್ತ ಯು.ಟಿ ಖಾದರ್ ನನ್ನು ಮುಸ್ಲಿಮರು ಬರೀ ರಾಜಕಾರಣಿಯಾಗಿ ಕಂಡರೆ ಸಾಕು. ಧಾರ್ಮಿಕ ಮುಖಂಡರಾಗಿ ಕಾಣುವುದು ಬೇಡ. ಉಲೆಮಾ, ಸಾತ್ವಿಕರು ತುಂಬಿದ ಧಾರ್ಮಿಕ ವೇದಿಕೆಗೆ ಮುಸ್ಲಿಂ ನಾಯಕನಾಗಿ ಹತ್ತಿಸುವುದು ತರವಲ್ಲ. ಅದು ಆತನ ಭೂತಾರಾಧನೆಗೆ ನಾವು ಕೊಡುವ ಅಂಗೀಕಾರವಾಗಿತ್ತೆ. ಖಾದರ್ ಕೊರಗಜ್ಜನಿಗೂ ಕಲ್ಲುರ್ಟಿ, ಪಂಜುರ್ಲಿಗೂ ಆರಾಧಿಸಲಿ. ಪ್ರಸಾದ ಪಡೆದು ತಲೆಗೆ ಮೆತ್ತಿಕೊಂಡು ನರಕಕ್ಕೆ ಹೋಗಲಿ. ಅದು ಆತನ ವೈಯಕ್ತಿಕ ಸ್ವಾತಂತ್ರ್ಯ. ಅದು ಭಾರತದಲ್ಲಿ ಎಲ್ಲರಿಗೂ ಇರುವ ಸಂವಿಧಾನಿಕ ಸ್ವಾತಂತ್ರ. ಅದನ್ನು ತಡೆಯುವ ಹಕ್ಕು ನನಗಿಲ್ಲ. ಆದರೆ ಧಾರ್ಮಿಕ ನಾಯಕನಾಗಿ ನಾವು ಅಂಗೀಕರಿಸುವುದು, ಆತನ ಭೂತಾರಾಧನೆಯನ್ನು ನಾವು ಒಪ್ಪಿಕೊಂಡಂತಾಗುತ್ತದೆ. ಉಲಮಾಗಳು ಅವನಿಗೆ ಗೌರವ ಕೊಡುವುದು ಮುಸ್ಲಿಂ ಸಮುದಾಯಕ್ಕೆ ಕೆಟ್ಟ ಸಂದೇಶವಾಗಿ ಪರಿಣಮಿಸುತ್ತದೆ ಎಂದು ಯು.ಟಿ.ಖಾದರ್ ನಡವಳಿಕೆ ಆಕ್ಷೇಪಿಸಿ ಸಾಲೆತ್ತೂರು ಫೈಝಿ ಪೋಸ್ಟ್ ಹಂಚಿಕೊಂಡಿದ್ದಾರೆ.




