September 19, 2024

ಪತ್ನಿ, ಆಕೆಯ ಪ್ರಿಯಕರನ ಕೊಲೆಗೈದ ಪತಿ

0

ಬೆಳಗಾವಿ: ಮದುವೆಯಾಗಿ ಒಂದೇ ತಿಂಗಳಲ್ಲೇ ಬಿಟ್ಟು ಹೋಗಿದ್ದ ಪತ್ನಿಯನ್ನು ಹಾಗೂ ಆಕೆಯ ಪ್ರಿಯಕರನನ್ನು ಯುವಕನೊಬ್ಬ ಕೊಚ್ಚಿ ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ.

ಅಥಣಿ ನಿವಾಸಿಯಾಗಿರೋ ತೌಫೀಕ್‌ (21) ಎಂಬ ಯುವಕ ಈ ಜೋಡಿ ಕೊಲೆ ನಡೆಸಿ ಸದ್ಯ ಪರಾರಿಯಾಗಿದ್ದಾನೆ.

ಅಥಣಿಯ ಕೋಕಟನೂರು ಗ್ರಾಮದ ತೌಫಿಕ್‌ಗೆ ಕಳೆದ ನಾಲ್ಕು ತಿಂಗಳ ಹಿಂದೆ ಹಿನಾ ಕೌಸರ್ ಎಂಬ 19 ವರ್ಷದ ಯುವತಿಯ ಜೊತೆ ಮದುವೆ ಮಾಡಿಸಲಾಗಿತ್ತು.

ಆದರೆ ಮದುವೆಯಾಗಿ ಒಂದೇ ತಿಂಗಳಿನಲ್ಲಿ ಆತನ ಪತ್ನಿ ಹೀನಾ ಕೌಸರ್ ತಾನು ಪ್ರೀತಿಸುತ್ತಿದ್ದ ಯಾಸೀನ್ ಎಂಬಾತನ ಜೊತೆ ಪರಾರಿಯಾಗಿದ್ದಳು. ಈ ವಿಚಾರವಾಗಿ ಗಲಾಟೆಯಾಗಿದ್ದು, ರಾಜಿ ಪಂಚಾಯಿತಿಯನ್ನೂ ನಡೆಸಲಾಗಿತ್ತು.

ಸಮಾಜದ ಪ್ರಮುಖರ ಸಮ್ಮುಖದಲ್ಲಿ ರಾಜಿ ಪಂಚಾಯಿತಿ ನಡೆಸಿದ ಗ್ರಾಮಸ್ಥರು ತೌಫಿಕ್ ಜೊತೆಗಿನ ಸಂಬಂಧ ಮುರಿದು ಯಾಸೀನ್‌ ಜೊತೆ ಹಿನಾ ಕೌಸರ್‌ಗೆ ಮರು ಮದುವೆ ಮಾಡಿಸಿದ್ದರು. ಇದು ತೌಫಿಕ್‌ಗೆ ಅವಮಾನದ ಜೊತೆಗೆ ಆಕ್ರೋಶಕ್ಕೆ ಕಾರಣವಾಗಿದ್ದು, ಹಲವರಲ್ಲಿ ತನ್ನ ಅಸಮದಾನ ಹೇಳಿಕೊಂಡಿದ್ದ.

ನಿನ್ನೆ ಸಂಜೆ ಅದೇ ಕೋಪದಲ್ಲಿ ಮಾಜಿ ಪತ್ನಿ ಹಾಗೂ ಆಕೆಯ ಗಂಡ ವಾಸವಾಗಿದ್ದ ಮನೆಗೆ ತೆರಳಿ ಇಬ್ಬರನ್ನೂ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ಈ ವೇಳೆ ಹಲ್ಲೆಯನ್ನು ತಡೆಯುಲು ಬಂದ ತಾಯಿ ಹಾಗೂ ಮಾವನ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿ ಬಳಿಕ ಪೊಲೀಸರಿಗೆ ಶರಣಾಗುವುದಾಗಿ ತಿಳಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಗಾಯಾಳುಗಳಿಗೆ ಮೀರಜ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಐಗಳಿ ಪೊಲೀಸರು ತೌಫಿಕ್‌ಗಾಗಿ ಹುಡುಕಾಟ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!