ಬಂಟ್ವಾಳ: ತಾಯಿ, ಮಗಳಿಗೆ ಚಾಕು ತೋರಿಸಿ ಲಕ್ಷಾಂತರ ರೂ. ಮೌಲ್ಯದ ನಗ ನಗದು ಕಳವುಗೈದ ಪ್ರಕರಣ:
ಏಳು ಮಂದಿ ಆರೋಪಿಗಳ ಬಂಧನ
ಬಂಟ್ವಾಳ: ತಾಯಿ ಮಗಳಿಗೆ ಚಾಕು ತೋರಿಸಿ ಲಕ್ಷಾಂತರ ರೂ. ಮೌಲ್ಯದ ನಗ ನಗದು ಕಳವು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪೋಲೀಸರ ಸ್ಪೆಷಲ್ ಟೀಂ ಒಟ್ಟು ಏಳು ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲುಕಿನ ಮಾಳ ಗ್ರಾಮದ ದರ್ಖಾಸು ಮಾಳ ಮಲ್ಲಾರು ನಿವಾಸಿ ಗಣೇಶ್ ನಾಯ್ಕ್, ಮಂಗಳೂರು ಐಕಳ ಗ್ರಾಮದ ಬಳ್ಳಂಜೆ ಮುಂಡಿಕಾಡು ನಿವಾಸಿ ರಾಕೇಶ್ ಎಲ್ ಪಿಂಟೋ, ದರ್ಖಾಸು ಮಾಳ ಮಲ್ಲಾರು ನಿವಾಸಿ ದಿನೇಶ್ ನಾಯ್ಕ್, ಕಾರ್ಕಳ ತಾಲೂಕಿನ ಮಾಳ ಗ್ರಾಮದ ಇಂದಿರಾನಗರ ನಿವಾಸಿ ಸಾಗರ್ ಶೆಟ್ಟಿ, ಕಡಬ ತಾಲೂಕಿನ ಕಾಯ್ಮಣ ಗ್ರಾಮದ ಕೆಲೆಂಬೇರಿ ಬೆಳಂದೂರು ನಿವಾಸಿ ಎಂ.ಸೀತಾರಾಮ, ಕಡಬ ತಾಲೂಕಿನ ಕಾಯ್ಮಣ ಗ್ರಾಮದ ಕೆಲೆಂಬೇರಿ ಬೆಳಂದೂರು ನಿವಾಸಿ ಸುದೀರ್ ಹಾಗೂ ಮೂಲತ: ಬಂಟ್ವಾಳ ಇರಾ ಗ್ರಾಮ, ಪ್ರಸ್ತುತ ಚಿಕ್ಕಮಗಳೂರು ಗೌರಿ ಕಾಲುವೆ ನಿವಾಸಿ ಮಹಮ್ಮದ್ ಹನೀಫ್ ಬಂಧಿತ ಆರೋಪಿಗಳು.
ಬಂಧಿತರಿಂದ ದರೋಡೆಗೈದ 3.15 ಲಕ್ಷ ಮೌಲ್ಯದ 54 ಗ್ರಾಂ ಚಿನ್ನಾಭರಣ ಹಾಗೂ 10 ಲಕ್ಷಮೌಲ್ಯದ ಇನ್ನೋವಾ ಮತ್ತು ಇಂಡಿಕಾ ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೋಲಿಸರ ವಿಶೇಷ ಪ್ರಯತ್ನದ ಮೂಲಕ ಆರೋಪಿಗಳ ಪತ್ತೆ ಕಾರ್ಯವನ್ನು ಮೆಚ್ಚಿ ಬಹುಮಾನವನ್ನು ಘೋಷಣೆ ಮಾಡಿದ್ದಾರೆ.




