ಕೋಟಾ ಜಿಲ್ಲೆಯ ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇಯಲ್ಲಿ ಭೀಕರ ಅಪಘಾತ: ಐವರು ಮಹಿಳೆಯರು ಸೇರಿ 8 ಮಂದಿ ಸ್ಥಳದಲ್ಲೇ ಮೃತ್ಯು
ಕೋಟಾ (ರಾಜಸ್ಥಾನ): ರಾಜಸ್ಥಾನದ ಕೋಟಾ ಜಿಲ್ಲೆಯ ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇಯಲ್ಲಿ ಇಂದು ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಪ್ರಯಾಣಿಕರಿದ್ದ ಮಿನಿ ಬಸ್ವೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಐವರು ಮಹಿಳೆಯರು ಸೇರಿದಂತೆ ಕನಿಷ್ಠ ಎಂಟು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ 17 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಧ್ಯಪ್ರದೇಶದ ಭೋಪಾಲ್ನಿಂದ ರಾಜಸ್ಥಾನದ ಪ್ರಸಿದ್ಧ ಯಾತ್ರಾಸ್ಥಳ ‘ಖಾತು ಶ್ಯಾಮ್’ಗೆ ಒಟ್ಟು 27 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್ ಈ ದುರಂತಕ್ಕೆ ಈಡಾಗಿದೆ.
ಸಿಮ್ಲಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಎಂಟು ಪಥಗಳ (8-Lane) ಎಕ್ಸ್ಪ್ರೆಸ್ವೇನಲ್ಲಿ ಮುಂಜಾನೆ 8 ಗಂಟೆಯ ಸುಮಾರಿಗೆ ಈ ಅನಾಹುತ ಸಂಭವಿಸಿದೆ. ಅತಿವೇಗದಲ್ಲಿದ್ದ ಬಸ್ ಚಾಲಕ ನಿದ್ರೆಯ ಮಂಪರಿನಲ್ಲಿದ್ದ ಕಾರಣ, ವಾಹನವು ಚಾಲಕನ ನಿಯಂತ್ರಣ ತಪ್ಪಿ ಎಕ್ಸ್ಪ್ರೆಸ್ವೇನ ಕಂಬಿಬೇಲಿಯನ್ನು (Guardrail) ತಳ್ಳಿಕೊಂಡು ಸೇತುವೆಯ ಕಲ್ವರ್ಟ್ನಿಂದ ಕೆಳಗಿನ ಕಂದಕಕ್ಕೆ ಉರುಳಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದುರಂತದಲ್ಲಿ ಮೃತಪಟ್ಟ ಎಂಟು ಜನರನ್ನು ಅರುಣಾ, ವೈಷ್ಣವಿ, ತ್ರಿಶಾ, ಕೃಷ್ಣ, ಅನಿತಾ, ಓಂ, ಸೂರ್ಯವಂಶಿ ಮತ್ತು ರಾಜು ಎಂದು ಗುರುತಿಸಲಾಗಿದೆ.
ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯವಾಗಿ ಭಾರಿ ಆಕ್ರೋಶ ಹಾಗೂ ಆತಂಕ ವ್ಯಕ್ತವಾಯಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ 4 ಆಂಬ್ಯುಲೆನ್ಸ್ಗಳನ್ನು ರವಾನಿಸಿ, ಸಾರ್ವಜನಿಕರ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಾಳುಗಳನ್ನು ತಕ್ಷಣವೇ ಕೋಟಾದ ಎಂಬಿಎಸ್ (MBS) ಆಸ್ಪತ್ರೆ ಹಾಗೂ ನ್ಯೂ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಕೋಟಾ ಜಿಲ್ಲಾಧಿಕಾರಿ ಪೀಯೂಷ್ ಸಮರಿಯಾ ಹಾಗೂ ಐಜಿ ಹರೇಂದ್ರ ಮಹಾವರ್ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. “ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯ ಯಾರೊಬ್ಬರ ಪರಿಸ್ಥಿತಿಯೂ ಗಂಭೀರವಾಗಿಲ್ಲ” ಎಂದು ಅಡಿಷನಲ್ ಎಸ್ಪಿ ರಾಮ್ ಕಲ್ಯಾಣ್ ಮೀನಾ ಸ್ಪಷ್ಟಪಡಿಸಿದ್ದಾರೆ.




