ಕಾಲೇಜಿಗೆ ತೆರಳಿದ್ದ ಯುವತಿ ನಾಪತ್ತೆ: ಜೈಲಿನ ಆವರಣದಲ್ಲಿ ಯುವತಿಯ ಮೃತದೇಹ ಪತ್ತೆ
ಮುಂಬೈ: ಇಲ್ಲಿನ ತಲೋಜಾ ಜೈಲು ಆವರಣದಲ್ಲಿ 19 ವರ್ಷದ ಯುವತಿಯ ಮೃತದೇಹವೊಂದು ಪತ್ತೆಯಾಗಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರ ತಂಡ ಧಾವಿಸಿ, ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿತ್ತು.
ಬಳಿಕ ಈ ಪ್ರಕರಣದ ತನಿಖೆಯನ್ನು ಕೈಗೊಂಡ ಪೊಲೀಸರಿಗೆ ಆಘಾತಕಾರಿ ಮಾಹಿತಿಯೊಂದು ದೊರಕಿತ್ತು.
ನವಿ ಮುಂಬೈನ ಕಲಾಂಬೋಲಿ ಪ್ರದೇಶದ ನಿವಾಸಿ 19 ವರ್ಷದ ಯುವತಿ ಕಾಲೇಜಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋಗಿದ್ದಳು.
ಆದರೆ ರಾತ್ರಿಯಾದರೂ ಆಕೆ ಮನೆಗೆ ವಾಪಸ್ಸಾಗಿರಲಿಲ್ಲ. ಹೀಗಾಗಿ ಮನೆಯವರು ಆತಂಕಗೊಂಡು ಬಳಿಕ ಪೊಲೀಸರಿಗೆ ದೂರು ನೀಡಿದ್ದರು. ಇತ್ತ ಇದೇ ದಿನ ರೈಲ್ವೇ ಪೊಲೀಸರ ಮೂಲಕ ಪೊಲೀಸರಿಗೆ ಆತ್ಮಹತ್ಯೆ ಪ್ರಕರಣವೊಂದರ ಮಾಹಿತಿ ಸಿಕ್ಕಿತ್ತು.
ವೈಷ್ಣವಿ ಮನೋಹರ್ ಬಾಬರ್ (19) ಮತ್ತು ವೈಭವ್ ಬುರುಗಲ್ಲೆ (24) ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು.
ಆದರೆ ಕೆಲ ದಿನಗಳಿಂದ ವೈಷ್ಣವಿಯು ಪ್ರಿಯಕರನಿಂದ ದೂರವಾಗಲು ಪ್ರಯತ್ನಿಸುವ ಮೂಲಕ ಪ್ರೀತಿ ಕೊನೆಗೊಳಿಸಲು ಬಯಸಿದ್ದಳು. ಈ ಕುರಿತು ಅವರಿಬ್ಬರ ನಡುವೆ ಜಗಳ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಅಂತೆಯೇ ಜಗಳ ವಿಕೋಪಕ್ಕೆ ಹೋಗಿದ್ದು, ಪ್ರಿಯಕರನೇ ಯುವತಿಯ ಕತ್ತು ಹಿಸುಕಿ ಕೊಂದಿದ್ದಾನೆ. ಬಳಿಕ ಕೋಪದಿಂದ ಆತನೂ ಪತ್ರ ಬರೆದು ಚಲಿಸುತ್ತಿದ್ದ ರೈಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನನ್ನ ಸಾವಿಗೆ ಯಾರೂ ಕಾರಣವಲ್ಲ. ಅಲ್ಲದೇ ಗೆಳತಿಯ ಕೊಲೆಯಿಂದ ನೋವಾಗಿ ಈ ರೀತಿ ಮಾಡಿಕೊಂಡಿದ್ದೇನೆ ಎಂದು ಯುವಕ ಡೆತ್‌ನೋಟ್‌ನಲ್ಲಿ ತಿಳಿಸಿದ್ದಾನೆ.





