ಮಂಗಳೂರು: 50.93 ಲಕ್ಷ ರೂ. ಮೌಲ್ಯದ ಚಿನ್ನ ಅಕ್ರಮ ಸಾಗಾಟ: ದುಬೈನಿಂದ ಬಂದಿದ್ದ ಇಬ್ಬರು ಪ್ರಯಾಣಿಕರ ಬಂಧನ
ಮಂಗಳೂರು: ಅಬುಧಾಬಿ ಮತ್ತು ದುಬೈನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಬಂದಿದ್ದ ಇಬ್ಬರು ಪ್ರಯಾಣಿಕರು ಅಕ್ರಮವಾಗಿ ಸಾಗಿಸುತ್ತಿದ್ದ 50.93 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಜನವರಿ 12ರಂದು ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರು ಪ್ರಯಾಣಿಕರು ಗುದನಾಳದಲ್ಲಿ ಪೇಸ್ಟ್ ರೂಪದಲ್ಲಿ ಮತ್ತು ಚೆಕ್‌ಇನ್ ಬ್ಯಾಗೇಜ್‌ನಲ್ಲಿ ಚಾಕೊಲೇಟ್ ಬಾಕ್ಸ್‌ಗಳಲ್ಲಿ ಬಚ್ಚಿಟ್ಟು ಚಿನ್ನವನ್ನು ಕಳ್ಳ ಸಾಗಾಟ ಮಾಡಲು ಯತ್ನಿಸಿದ್ದರು.
815 ಗ್ರಾಂ ತೂಕದ 24 ಕ್ಯಾರೆಟ್ ಶುದ್ಧತೆಯ ಚಿನ್ನದ ಅಂದಾಜು ಮೌಲ್ಯ 50,93,750 ರೂಪಾಯಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





