ಮಂಗಳೂರು: ಹಠಾತ್ ಬ್ರೇಕ್ ಹಾಕಿದ ಚಾಲಕ: ಬಸ್ ನಲ್ಲಿದ್ದ ಮಹಿಳೆ ಕೆಳಗೆ ಬಿದ್ದು ಮೃತ್ಯು
ಮಂಗಳೂರು: ಬಸ್ ಒಳಗೆ ಇದ್ದ ಮಹಿಳಾ ಪ್ರಯಾಣಿಕರೊಬ್ಬರು ಚಾಲಕ ಹಠಾತ್ ಬ್ರೇಕ್ ಹಾಕಿದ ಪರಿಣಾಮ ನಗರದ ಹೊರವಲಯದ ಜೋಕಟ್ಟೆ ಕ್ರಾಸ್ ಬಳಿ ವಾಹನದಿಂದ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಮೃತಪಟ್ಟರು.
ಈರಮ್ಮ( 65) ಮೃತ ಮಹಿಳೆ. ಮಗಳೊಂದಿಗೆ ಖಾಸಗಿ ಬಸ್ಸಿನಲ್ಲಿ ಸುರತ್ಕಲ್ ಕಡೆಗೆ ಪ್ರಯಾಣಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಸ್ ಬೆಳಿಗ್ಗೆ 10:10 ರ ಸುಮಾರಿಗೆ ಜೋಕಟ್ಟೆ ಕ್ರಾಸ್ ನ ಸರ್ವೀಸ್ ಸ್ಟೇಷನ್ ಬಳಿ ಸಾಗುವಾಗ ಚಾಲಕ ಹಠಾತ್ ಬ್ರೇಕ್ ಹಾಕಿದ್ದ. ಚಾಲಕನ ಪಕ್ಕದ ಮುಂದಿನ ಸೀಟಿನಲ್ಲಿ ಕುಳಿತಿದ್ದ ಈರಮ್ಮ ಬಸ್ಸಿನಿಂದ ಹೊರಕ್ಕೆ ಬಿದ್ದಿದ್ದರು.
ಬಸ್ ನ ಹಿಂಭಾಗದ ಎಡ ಚಕ್ರವು ಈರಮ್ಮ ಅವರ ತಲೆಯ ಮೇಲೆ ಚಲಿಸಿತ್ತು. ತಲೆಗೆ ಗಂಭೀರವಾಗಿ ಗಾಯಗೊಂಡಿದ್ದರಿಂದ ಮಹಿಳೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.





