ಮಂಗಳೂರು: ಪ್ರೇಯಸಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣ: ಆರೋಪಿಗೆ 18 ವರ್ಷ ಜೈಲು ಶಿಕ್ಷೆ, 2 ಲಕ್ಷ ರೂ. ದಂಡ
ಮಂಗಳೂರು: ಮಾಜಿ ಪ್ರೇಯಸಿಯನ್ನು ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣದ ಆರೋಪಿಗೆ ಜಿಲ್ಲಾ 2 ನೇ ಹೆಚ್ಚುವರಿ ನ್ಯಾಯಾಲಯ ಒಟ್ಟು 18 ವರ್ಷ 1 ತಿಂಗಳ ಸಜೆ ಹಾಗೂ ಸಂತ್ರಸ್ತೆಗೆ ರೂ. 2 ಲಕ್ಷ ರೂ ನೀಡುವಂತೆ ಆದೇಶ ನೀಡಿದೆ.
2019ರ ಜೂ.28 ರಂದು ದೇರಳಕಟ್ಟೆಯ ಬಗಂಬಿಲ ರಸ್ತೆಯಲ್ಲಿನ ಶಾಂತಿಧಾಮ ಬಳಿ ಆರೋಪಿ ಸುಶಾಂತ್ ಕಾಲೇಜಿನಿಂದ ವಾಪಾಸಾಗುತ್ತಿದ್ದಾಗ ಸಂತ್ರಸ್ತೆಯನ್ನು ಹಿಂಬಾಲಿಸಿಕೊಂಡು ಬಂದು ದಾಳಿ ನಡೆಸಿದ್ದ. ಯುವತಿಯನ್ನು ಅಪ್ಪಿಹಿಡಿದು ಚೂರಿಯಿಂದ ಎದೆ, ಹೊಟ್ಟೆ ಹಾಗೂ ದೇಹದ ವಿವಿದೆಡೆ 12 ಬಾರಿ ಇರಿದು ನಂತರ ಅದೇ ಚೂರಿಯಿಂದ ತನ್ನ ಕುತ್ತಿಗೆಗೆ ಹಾಗೂ ಕೈ ಗೆ ಇರಿದು ಆತ್ಮಹತ್ಯೆಗೆ ಯತ್ನಿಸಿದ್ದ.
ಘಟನೆಯನ್ನು ಕಂಡ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಸಿಬ್ಬಂದಿ ತಕ್ಷಣ ಆಂಬ್ಯುಲೆನ್ಸ್ ಸಮೇತ ಘಟನಾ ಸ್ಥಳಕ್ಕೆ ಬಂದು ಸಂತ್ರಸ್ತೆಯನ್ನು ರಕ್ಷಿಸಿ ಚಿಕಿತ್ಸೆಯನ್ನು ಕೊಡಿಸಿದ್ದರು.
ಆರೋಪಿ ನೃತ್ಯ ತರಬೇತಿದಾರನಾಗಿದ್ದು ಸಂತ್ರಸ್ತೆ ಕಲಿಯುತ್ತಿದ್ದ ಕಾಲೇಜಿನಲ್ಲಿ ನೃತ್ಯ ಕಲಿಸುತ್ತಿದ್ದ. ಸಲುಗೆಯನ್ನು ತಪ್ಪಾಗಿ ಅರ್ಥೈಸಿ ಯುವತಿಯನ್ನು ಪ್ರೀತಿಸುವಂತೆ ಪೀಡಿಸಿ ಒಂದು ಬಾರಿ ಕಾರ್ಕಳ ಪೊಲೀಸರ ಅತಿಥಿಯಾಗಿದ್ದ.
ಇದೇ ದ್ವೇಶದಿಂದ ಆರೋಪೊ ಸಂತ್ರಸ್ತೆಯ ಕೊಲೆಗೆ ಯತ್ನಿಸಿದ್ದ. ಪ್ರಕರಣದ ಸಂಪೂರ್ಣ ಘಟನೆ ಕೆ.ಎಸ್ ಹೆಗ್ಡೆ ಆಸ್ಪತ್ರೆ ಹಿಂಭಾಗದ ಸಿಸಿಟಿವಿಯಲ್ಲಿ ಸೆರೆಯಾಗಿರುವುದು ತನಿಖಾದಿಕಾರಿಗಳು ಅದನ್ನೇ ಪ್ರಮುಖ ಸಾಕ್ಷ್ಯಾಧಾರವನ್ನಾಗಿ ದೋಷಾರೋಪಣಾ ಪತ್ರದಲ್ಲಿ ಅಳವಡಿಸಲಾಗಿತ್ತು.





