ಮಂಗಳೂರು: ಸ್ಕೂಟರ್‌ನಲ್ಲಿ ಡ್ರಗ್ಸ್ ಮಾರಾಟ: ಸೊತ್ತುಗಳ ಸಹಿತ ಇಬ್ಬರ ಬಂಧನ
ಮಂಗಳೂರು: ಡ್ರಗ್ಸ್ ಜಾಲದ ವಿರುದ್ಧ ಮಂಗಳೂರು ಪೊಲೀಸರ ಕಾರ್ಯಾಚರಣೆ ಮುಂದುವರಿದಿದ್ದು, ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಡೀಲ್ ಬಳಿ ಸ್ಕೂಟರ್‌ನಲ್ಲಿ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿ ಅವರಿಂದ 1,92,800 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಜಾಲ್ ನಿವಾಸಿ ಅಶ್ಪಾಕ್ ಯಾನೆ ಜುಟ್ಟು ಅಶ್ಪಾಕ್ (27) ಮತ್ತು ಕಾಟಿಪಳ್ಳದ ಉಮರ್ ಫಾರೂಕ್ ಇರ್ಫಾನ್ (26) ಬಂಧಿತ ಆರೋಪಿಗಳು. ಅವರಿಂದ ಎಂಡಿಎಂಎ ಹಾಗೂ ಕೃತ್ಯಕ್ಕೆ ಬಳಸಿದ ಸ್ಕೂಟರ್ ಮತ್ತು ಮೊಬೈಲ್ ಫೋನ್ ನ್ನು ವಶಪಡಿಸಿಕೊಳ್ಳಲಾಗಿದೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ಈ ಕಾರ್ಯಾಚರನೆ ನಡೆಸಿದರು. ಆರೋಪಿ ಜುಟ್ಟು ಅಶ್ಫಾಕ್ ಮೇಲೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ, ಕಂಕನಾಡಿ ನಗರ ಪೊಲೀಸ್ ಠಾಣೆ, ಉಳ್ಳಾಲ ಪೊಲೀಸ್ ಠಾಣೆ, ಸುರತ್ಕಲ್ ಪೊಲೀಸ್ ಮತ್ತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗಳಲ್ಲಿ ಕೊಲೆ ಯತ್ನ, ದರೋಡೆ, ಸುಲಿಗೆ ದೋಂಬಿಯಂತಹ ಒಟ್ಟು 12 ಪ್ರಕರಣಗಳು ದಾಖಲಾಗಿರುತ್ತವೆ.
ಆರೋಪಿ ಇರ್ಫಾನ್‌ನ ಮೇಲೆ ಮಂಗಳೂರು ದಕ್ಷಿಣ, ಮಂಗಳೂರು ಗ್ರಾಮಾಂತರ, ಉಳ್ಳಾಲ, ಮೂಡುಬಿದಿರೆ, ಬರ್ಕೆ, ಕೊಣಜೆ, ಸುರತ್ಕಲ್, ಕಾರ್ಕಳ ನಗರ ಪೊಲೀಸ್ ಠಾಣೆ, ಶಿರ್ವ, ಕಾರ್ಕಳ ಗ್ರಾಮಾಂತರ ಠಾಣೆ, ಮಂಗಳೂರು ಉತ್ತರ ಮತ್ತು ಪೂರ್ವ ಪೊಲೀಸ್ ಠಾಣೆಗಳಲ್ಲಿ ಕೊಲೆಯತ್ನ, ದರೋಡೆ, ಸುಲಿಗೆ, ಸರಗಳ್ಳತನ, ದೊಂಬಿ, ವಾಹನ ಕಳ್ಳತನದಂತಹ ಒಟ್ಟು 25 ಪ್ರಕರಣಗಳು ದಾಖಲಾಗಿರುತ್ತವೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಪ್ರಕಟನೆ ತಿಳಿಸಿದೆ.





