ಲಕ್ನೋ: ವಾಯುನೆಲೆ ಬಳಿ ಟ್ರಕ್‌ನಿಂದ ಮಿರಾಜ್ ಯುದ್ಧ ವಿಮಾನದ ಟೈರ್ ಕಳವು:
ಎಫ್‌ಐಆರ್ ದಾಖಲು
ಲಕ್ನೋ: ಬಕ್ಷಿ-ಕಾ-ತಲಾಬ್ ವಾಯುನೆಲೆಯಿಂದ ಜೋಧ್‌ಪುರ ವಾಯುನೆಲೆಗೆ ತೆರಳುತ್ತಿದ್ದ ಸೇನಾ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಟ್ರಕ್‌ನಿಂದ ಮಿರಾಜ್ ಫೈಟರ್ ಜೆಟ್‌ನ ಟೈರ್ ಅನ್ನು ಅಪರಿಚಿತ ದುಷ್ಕರ್ಮಿಗಳು ಕದ್ದಿದ್ದಾರೆ.
ಟ್ರಕ್ ಜೋಧ್‌ಪುರ ವಾಯುನೆಲೆಗೆ ತೆರಳುತ್ತಿದ್ದ ಲಕ್ನೋದ ಶಹೀದ್ ಪಥ್‌ನಲ್ಲಿ ನವೆಂಬರ್ 27 ರ ತಡರಾತ್ರಿಯಲ್ಲಿ ಕಳ್ಳತನ ನಡೆದಿದೆ. ಟ್ರಕ್ ಚಾಲಕ ಹೇಮ್ ಸಿಂಗ್ ರಾವತ್ ಅವರು ಬಕ್ಷಿ-ಕಾ-ತಲಾಬ್ ವಾಯುನೆಲೆಯಿಂದ ಮಿಲಿಟರಿ ಸರಕುಗಳನ್ನು ಸಾಗಿಸುತ್ತಿದ್ದಾರೆ ಎಂದು ಖಚಿತಪಡಿಸಿದ್ದಾರೆ.
ಶಹೀದ್ ಪಥದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸಂದರ್ಭ ದುರ್ಬಳಕೆ ಮಾಡಿಕೊಂಡು ಸ್ಕಾರ್ಪಿಯೋ ವಾಹನದಲ್ಲಿ ಬಂದ ದುಷ್ಕರ್ಮಿಗಳು ಟೈರ್ ಕಟ್ಟಲು ಬಳಸಿದ್ದ ಪಟ್ಟಿಯನ್ನು ಕಿತ್ತುಕೊಂಡು ಕಳ್ಳತನ ಮಾಡಿದ್ದಾರೆ. ಲಾರಿ ಚಾಲಕನಿಗೆ ವಿಷಯ ತಿಳಿಯುವಷ್ಟರಲ್ಲಿ ಕಳ್ಳರು ಪರಾರಿಯಾಗಿದ್ದರು. ಅವರು ಪೊಲೀಸರಿಗೆ ಕರೆ ಮಾಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.
ಟ್ರಕ್ ನಿಧಾನವಾಗಿ ಚಲಿಸುತ್ತಿದ್ದ ಶಹೀದ್ ಪಥದಲ್ಲಿ ಜಾಮ್ ಉಂಟಾದಾಗ ಕಳ್ಳರು ಮಧ್ಯರಾತ್ರಿ 12:30 ರಿಂದ 1 ರ ನಡುವೆ ಕಳ್ಳತನ ಮಾಡಿದ್ದಾರೆ ಎಂದು ಟ್ರಕ್ ಚಾಲಕ ಹೇಳಿದರು.
ಚಾಲಕನ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದು, ವಿಚಾರಣೆ ನಡೆಸುತ್ತಿರುವ ಪೊಲೀಸರು ಸ್ಥಳೀಯ ಸಿಸಿಟಿವಿ ಕ್ಯಾಮರಾವನ್ನೂ ಪರಿಶೀಲಿಸುತ್ತಿದ್ದಾರೆ. ಮಿರಾಜ್-200 ಕ್ಕೆ ಬಳಸಲಾಗಿವ ಟೈರ್ ಗಳು ಆ ಯುದ್ಧವಿಮಾನವನ್ನು ಹೊರತುಪಡಿಸಿದರೆ ಬೇರೆ ಯಾವುದಕ್ಕೂ ಬಳಕೆ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ ಆದರೂ ಕಳ್ಳತನ ನಡೆದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ನ.27ರಂದು ಘಟನೆ ನಡೆದಿದ್ದು, ಡಿ.1ರಂದು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೂರ್ವ ಡಿಸಿಪಿ ಅಮಿತ್ ಕುಮಾರ್ ತಿಳಿಸಿದ್ದಾರೆ. ಶೀಘ್ರವೇ ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.





