ಭಾರತದಿಂದ ಅಫ್ಘಾನ್ ಗೆ ಔಷಧ ಮತ್ತು ಗೋಧಿ ರಫ್ತುಗಾಗಿ ಗಡಿ ತೆರವಿಗೆ ಪಾಕಿಸ್ತಾನ ಒಪ್ಪಿಗೆ
ನವದೆಹಲಿ: ವಾಘಾ ಗಡಿ ಮೂಲಕ ಅಫ್ಘಾನಿಸ್ತಾನದ ಜನರಿಗೆ ಮಾನವೀಯ ನೆಲೆಯಲ್ಲಿ ಅಪ್ಘನ್ ಟ್ರಕ್ ಗಳಲ್ಲಿ 50 ಸಾವಿರ ಮೆಟ್ರಿಕ್ ಟನ್ ಗೋಧಿ ಮತ್ತು ಜೀವ ರಕ್ಷಕ ಔಷಧವನ್ನು ಭಾರತ ಸಾಗಿಸಲು ಪಾಕಿಸ್ತಾನ ಶುಕ್ರವಾರ ಒಪ್ಪಿಕೊಂಡಿದೆ.
ಷರತ್ತುಗಳಿಲ್ಲದೆ ಅಫ್ಘಾನಿಸ್ತಾನಕ್ಕೆ ಮಾನವೀಯ ನೆರವನ್ನು ಕಳುಹಿಸುವ ಪ್ರಯತ್ನಗಳನ್ನು ಭಾರತವು ಚುರುಕುಗೊಳಿಸುತ್ತಿದ್ದಂತೆ, ಪಾಕಿಸ್ತಾನದ ಟ್ರಕ್‌ಗಳನ್ನು ಬಳಸಬೇಕೆಂಬ ಹಿಂದಿನ ಬೇಡಿಕೆಯನ್ನು ಕೈಬಿಟ್ಟು, ಅಫ್ಘಾನ್ ಟ್ರಕ್‌ಗಳ ಮೂಲಕ ಭಾರತದ ಸಹಾಯವನ್ನು ರವಾನಿಸಲು ಅವಕಾಶ ನೀಡುವುದಾಗಿ ಪಾಕಿಸ್ತಾನ ಶುಕ್ರವಾರ ಘೋಷಿಸಿತು.
ಪಾಕ್ ನೆಲದ ಮೂಲಕ ಅಫ್ಘಾನಿಸ್ತಾನಕ್ಕೆ ಗೋಧಿ ಹಾಗೂ ಜೀವ ರಕ್ಷಕವನ್ನು ಸಾಗಿಸಲು ಮಾರ್ಗವನ್ನು ಅಂತಿಮಗೊಳಿಸಲು ಪಾಕಿಸ್ತಾನದೊಂದಿಗೆ ಚರ್ಚೆ ನಡೆಯುತ್ತಿರುವುದಾಗಿ ಗುರುವಾರ ಭಾರತ ಹೇಳಿತ್ತು. ಮಾನವೀಯತೆ ನೆಲೆಯಲ್ಲಿ ನೆರವು ನೀಡುವುದಕ್ಕೆ ಯಾವುದೇ ಷರತ್ತನ್ನು ಹಾಕಬಾರದು ಎಂದಿತ್ತು. ಮಾನವೀಯ ನೆರವಿಗೆ ಷರತ್ತು ಹಾಕಬಾರದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದರು.
ಮಾನವೀಯ ಉದ್ದೇಶಗಳಿಗಾಗಿ ನೆರೆಯ ಅಫ್ಘಾನಿಸ್ತಾನಕ್ಕೆ ತನ್ನ ನೆಲದ ಮೂಲಕ ಗೋಧಿ ಹಾಗೂ ಜೀವ ರಕ್ಷಕ ಸಾಗಿಸಲು ಅವಕಾಶ ಮಾಡಿಕೊಡುವುದಾಗಿ ಪಾಕಿಸ್ತಾನ ಕಳೆದ ವಾರ ಭಾರತಕ್ಕೆ ಔಪಚಾರಿಕವಾಗಿ ತಿಳಿಸಿತ್ತು. ಗುರುವಾರ ಉಲ್ಟಾ ಹೊಡೆದಿತ್ತು, ಇದೀಗ ಅಪ್ಘನ್ ಟ್ರಕ್ ಗಳಲ್ಲಿ ಅಪ್ಘಾನಿಸ್ತಾನದಿಂದ ಭಾರತದಿಂದ ಗೋಧಿ ಮತ್ತು ಜೀವ ರಕ್ಷಕ ಸಾಗಿಸಲು ಒಪ್ಪಿಕೊಂಡಿರುವುದಾಗಿ ಪಾಕಿಸ್ತಾನ ವಿದೇಶಾಂಗ ಇಲಾಖೆ ಶುಕ್ರವಾರ ಹೇಳಿದೆ.
ತ್ವರಿತಗತಿಯಲ್ಲಿ ಮಾನವೀಯ ನೆರವನ್ನು ಪೂರೈಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದು ಪಾಕ್ ವಿದೇಶಾಂಗ ಇಲಾಖೆ ತಿಳಿಸಿದೆ.





