ದ್ವಿಚಕ್ರ ವಾಹನಕ್ಕೆ ಬಸ್ ಢಿಕ್ಕಿ: ಮಹಿಳೆ ಮೃತ್ಯು
ಬೆಂಗಳೂರು: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗೆ ಬಲಿಯಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅದೇ ರೀತಿ ಬುಧವಾರ ಸಂಜೆ ಬಿಎಂಟಿಸಿಗೆ ಗೃಹಿಣಿಯೊಬ್ಬರು ಬಲಿಯಾದ ಘಟನೆ ಸಿಲ್ಕ್‌ಬೋರ್ಡ್ ಸಮೀಪದ ಮಡಿವಾಳ ಫ್ಲೈಓವರ್ ಮೇಲೆ ನಡೆದಿದೆ.
ಸೀಮಾ ಬಿಎಂಟಿಸಿಗೆ ಬಲಿಯಾದ ಗೃಹಿಣಿ. ಬುಧವಾರ ಸಂಜೆ 6:30ರ ವೇಳೆಗೆ ಘಟನೆ ನಡೆದಿದ್ದು, ಗೃಹಿಣಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಿಎಂಟಿಸಿ ಬಸ್ ಚಾಲಕನ ಅಜಾಗರೂಕತೆಯಿಂದ ಅಪಘಾತವಾಗಿದೆ ಎಂದು ಆರೋಪಿಸಲಾಗಿದೆ.
ಬಸ್ ಪಕ್ಕದಲ್ಲಿ ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಗುದ್ದಿದ್ದರಿಂದ ಸವಾರರು ಆಯತಪ್ಪಿ ಬಿದ್ದಿದ್ದಾರೆ. ಘಟನೆಯಲ್ಲಿ ಗೃಹಿಣಿ ಸಾವನ್ನಪ್ಪಿದರೆ ಒಂದೂವರೆ ವರ್ಷದ ಮಗು ಗಾನವಿ ಹಾಗೂ ಆಕೆಯ ಪತಿ ಗುರುಮೂರ್ತಿ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ.





