ಲೋಕಸಭಾ ಕಲಾಪದ ವೇಳೆ ಸಂಸತ್ ಒಳಗೆ ನುಗ್ಗಿದ ಇಬ್ಬರು ಮೈಸೂರು ಮೂಲದವರು: ಒಟ್ಟು ನಾಲ್ವರ ಬಂಧನ
ನವ ದೆಹಲಿ: ಲೋಕಸಭಾ ಕಲಾಪದ ವೇಳೆ ಸಂಸತ್ ನೊಳಕ್ಕೆ ನುಗ್ಗಿದ ಇಬ್ಬರು ದುಷ್ಕರ್ಮಿಗಳ ಗುರುತು ಪತ್ತೆ ಹಚ್ಚಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ವರನ್ನು ಸಂಸತ್ ಭವನದ ಭದ್ರತಾ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ.
ಸಂಸತ್ತಿನಲ್ಲಿ ಇಂದು ನಡೆದ ದೊಡ್ಡ ಭದ್ರತಾ ಲೋಪದಲ್ಲಿ ಬಂಧಿತರಾದ ಇಬ್ಬರು ವ್ಯಕ್ತಿಗಳು ಮೈಸೂರು ಮೂಲದವರೆಂದು ತಿಳಿದು ಬಂದಿದ್ದು, ಅವರನ್ನು ಮೈಸೂರು ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ಸಾಗರ್ ಶರ್ಮ ಮತ್ತು ಮನೋರಂಜನ್ ಎಂದು ಗುರುತಿಸಲಾಗಿದೆ.
ಸಂಸತ್ತಿನ ಹೊರಗೆ ಹಳದಿ ಹೊಗೆಯುಗುಳುತ್ತಿದ್ದ ಕ್ಯಾನಿಸ್ಟರ್ ಹಿಡಿದುಕೊಂಡು ಪ್ರತಿಭಟಿಸುತ್ತಿದ್ದ ಓರ್ವ ಮಹಿಳೆ ಮತ್ತು ಪುರುಷನನ್ನು ನೀಲಂ (42) ಮತ್ತು ಅಮೋಲ್ ಶಿಂಧೆ (25) ಎಂದು ಗುರುತಿಸಲಾಗಿದೆ. ಒಟ್ಟು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿ ವಿವರಿಸಿದೆ.
ಐದು ಹಂತದ ಭದ್ರತಾ ವ್ಯವಸ್ಥೆಯನ್ನು ದಾಟಿ ಸಾಗರ್ ಮತ್ತು ಮನೋರಂಜನ್ ಅವರು ನೂತನ ಸಂಸತ್ ಕಟ್ಟಡದೊಳಗೆ ಕ್ಯಾನಿಸ್ಟರ್‌ಗಳೊಂದಿಗೆ ಹೇಗೆ ಪ್ರವೇಶಿಸಲು ಸಾಧ್ಯವಾಯಿತು ಎಂಬ ಪ್ರಶ್ನೆಯೂ ಇದೆ.
ಲೋಕಸಭಾ ಸಂಸದರು ಮತ್ತು ಭದ್ರತಾ ಸಿಬ್ಬಂದಿ ಇಬ್ಬರನ್ನೂ ಹಿಡಿಯುವಲ್ಲಿ ಸಫಲರಾದರು. ಅವರ ಬಳಿ ಇದ್ದ ಪಾಸ್ ಗಮನಿಸಿದಾಗ ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಕಚೇರಿ ನೀಡಿದ ಪಾಸ್‌ಗಳು ಎಂದು ತಿಳಿದು ಬಂದಿವೆ ಎಂದು ಅಮ್ರೋಹ ಸಂಸದ ದಾನಿಶ್ ಅಲಿ ಹೇಳಿದ್ದಾರೆ.
ಸಂಸತ್ ಭವನಕ್ಕೆ ಇಬ್ಬರು ದುಷ್ಕರ್ಮಿಗಳು ನುಗ್ಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸಂಜೆ 4ಗಂಟೆಗೆ ಸರ್ವ ಪಕ್ಷ ಸಭೆಯನ್ನು ಕರೆದಿರುವುದಾಗಿ ವರದಿ ತಿಳಿಸಿದೆ.




