March 29, 2026

ಮಂಗಳೂರು: ಸಮುದ್ರ ಪಾಲಾದ ಇಬ್ಬರು ಪಿಯುಸಿ ವಿದ್ಯಾರ್ಥಿಗಳ ಮೃತದೇಹ ಪತ್ತೆ:
ಸಮುದ್ರ ವಿಹಾರಕ್ಕೆಂದು ಬಂದಿದ್ದ ಇಬ್ಬರು ವಿದ್ಯಾರ್ಥಿಗಳು

0
image_editor_output_image-1522140095-1702186714554

ಮಂಗಳೂರು: ಸಮುದ್ರ ವಿಹಾರಕ್ಕೆಂದು ತೆರಳಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ  ಪತ್ತೆಯಾದ ಘಟನೆ ಸೋಮೇಶ್ವರ ಅಲಿಮಕಲ್ಲು ಸಮುದ್ರ ತೀರದ ಬಳಿ ನಡೆದಿದೆ.

ಮಂಜೇಶ್ವರದ ಕುಂಜತ್ತೂರು ಅಡ್ಕ ನಿವಾಸಿ ಶೇಖರ ಅವರ ಪುತ್ರ ಯಶ್ವಿತ್ (18) ಮತ್ತು ಕುಂಜತ್ತೂರು ಮಜಲ್ ನಿವಾಸಿ ಜಯೇಂದ್ರ ಅವರ ಪುತ್ರ ಯುವರಾಜ್ (18) ನೀರುಪಾಲದ ವಿದ್ಯಾರ್ಥಿಗಳು.

ಶನಿವಾರದಂದು 6 ಮಂದಿ ವಿದ್ಯಾರ್ಥಿಗಳು ಕಾಲೇಜು ಮುಗಿಸಿ ಸೋಮೇಶ್ವರ ದೇವಾಸ್ಥಾನಕ್ಕೆ ತೆರಳಿದ್ದರು. ಅಲ್ಲಿ ಊಟ ಮುಗಿಸಿ ಉಚ್ಚಿಲದ ಕಡೆಗೆ ಸುಮಾರು ಒಂದು ಕಿ. ಮೀ ಸಮುದ್ರದ ಬದಿಯಲ್ಲೇ ನಡೆದುಕೊಂಡು ಹೋಗಿದ್ದು, ಸೋಮೇಶ್ವರ ಅಲಿಮಕಲ್ಲು ಬಳಿ ಸಮುದ್ರಕ್ಕೆ ಇಳಿದಿದ್ದರು.

ಈ ಸಂದರ್ಭದಲ್ಲಿ ನಾಲ್ವರು ಸಮುದ್ರ ಬದಿಯಲ್ಲಿ ಕುಳಿತಿದ್ದರೆ, ಯುವರಾಜ್ ಮತ್ತು ಯಶ್ವಿತ್ ಸಮುದ್ರದ ನೀರಿಗಿಳಿದು ಕಲ್ಲಿನ ಬಳಿ ತೆರಳಿದ್ದರು. ಈ ಸಂದರ್ಭದಲ್ಲಿ ಸಮುದ್ರದ ಅಲೆಯೊಂದಕ್ಕೆ ಯುವರಾಜ್ ಜಾರಿ ಬಿದ್ದು, ಸಮುದ್ರ ಪಾಲಾದಾಗ ಯಶ್ವಿತ್ ಆತನನ್ನು ರಕ್ಷಿಸಲು ಹೋಗಿ ಸಮುದ್ರ ಪಾಲಾಗಿದ್ದಾರೆ. ಈ ವೇಳೆ ಅವರು ಮುಳುಗಿತ್ತಿದ್ದನ್ನು ಕಂಡ ಸ್ನೇಹಿತರು ಅಲ್ಲೇ ಪಕ್ಕದ  ಶೆಡ್‍ನಲ್ಲಿಟ್ಟಿದ್ದ ಟಯರ್ ಟ್ಯೂಬ್ ಬಳಸಿ ಅವರನ್ನು ರಕ್ಷಿಸಲು ಎಂದು ಸಮುದ್ರಕ್ಕೆ ಇಳಿದಿದ್ದಾರೆ. ಆದರೆ ಅವರಿಗೆ ಸಾಧ್ಯವಾಗದ ಕಾರಣ ಬೊಬ್ಬೆ ಹಾಕಿದ್ದಾರೆ.

ಈ ವೇಳೆ ಸ್ಥಳೀಯ ಈಜುಗಾರರು ಹುಡುಕಾಟ ನಡೆಸಿದ್ದಾರೆ. ವಿದ್ಯಾರ್ಥಿಗಳ ಪತ್ತೆಗಾಗಿ ಸ್ಥಳೀಯ ಈಜುಗಾರರು, ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿದಂತೆ ಉಳ್ಳಾಲ ಪೋಲಿಸರು ಕಾರ್ಯಚಾರಣೆ ನಡೆಸಿದ್ದು, ರಾತ್ರಿವರೆಗೂ ಪತ್ತೆಯಾಗಿರಲಿಲ್ಲ. ಬಳಿಕ ಇಂದು ಬೆಳಗ್ಗೆ ಹುಡುಕಾಡಿದಾಗ ಅದೇ ಸ್ಥಳದಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!