December 22, 2024

ಬೆಳ್ತಂಗಡಿ: ಕಾರಿನ ಮೇಲೆ ಒಂಟಿ ಸಲಗ ದಾಳಿ: ಇಬ್ಬರಿಗೆ ಗಾಯ

0

ಬೆಳ್ತಂಗಡಿ: ತಾಲೂಕಿನ ನೆರಿಯದ ಅಣಿಯೂರಿನಲ್ಲಿ ಒಂಟಿ ಸಲಗವು ಕಾರಿಗೆ ಹಾನಿ ಮಾಡಿ ಇಬ್ಬರ‌ನ್ನು ಗಾಯಗೊಳಿಸಿದ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.

ಪುತ್ತೂರು ಮೂಲದ ಅಬ್ದುಲ್‌ ರೆಹಮಾನ್‌ ಮತ್ತು ನಾಸಿಯಾ ಗಾಯಾಳುಗಳು.

ಕಾರಿನಲ್ಲಿ ಮಗು ಸಹಿತ ಏಳು ಮಂದಿ ನೆರಿಯದ ಸಂಬಂಧಿಕರ ಮನೆಗೆ ಪ್ರಯಾಣಿಸುತ್ತಿದ್ದರು. ಆನೆಯು ರಸ್ತೆಯಲ್ಲಿ ಸಂಚರಿಸುತ್ತಿರುವುದನ್ನು ತಿಳಿದಿದ್ದ ಸ್ಥಳೀಯರು ಆಗ ಆ ದಾರಿಯಾಗಿ ಬಂದ ಕಾರನ್ನು ಮುನ್ನೆಚ್ಚರಿಕೆ ದೃಷ್ಟಿಯಿಂದ ನಿಲ್ಲಿಸುವಂತೆ ಸೂಚಿಸಿದರು. ಕಾರನ್ನು ಕಟ್ಟಡವೊಂದರ ಬದಿ ನಿಲ್ಲಿಸುವಷ್ಟರಲ್ಲಿ ಆನೆ ಅದೇ ಪರಿಸರಕ್ಕೆ ಆಗಮಿಸಿತ್ತು. ಕಾರಿನಲ್ಲಿದ್ದ ಕೆಲವರು ಅಷ್ಟರಲ್ಲಿ ಕೆಳಗೆ ಇಳಿದು ಪಕ್ಕದ ಮನೆಯಲ್ಲಿ ರಕ್ಷಣೆ ಪಡೆದರು.

 

 

ಆನೆಯು ದಾಡೆಯ ಮೂಲಕ ಕಾರನ್ನು ಕಟ್ಟಡದ ಗೋಡೆಗೆ ಗುದ್ದಿ ಜಖಂಗೊಳಿಸಿ ಅನಂತರ ಅಲ್ಲಿಂದ ಮನೆಯ ಕಾಂಪೌಂಡ್‌ಗೆ ನುಗ್ಗಿ ಅಲ್ಲಿಂದ ತೋಟಕ್ಕೆ ಹೋಗಿದೆ. ಬಳಿಕ ನದಿಯ ಪರಿಸರದಲ್ಲಿ ಕಂಡಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ.

ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬಂದಿ ಪಟಾಕಿ ಸಿಡಿಸುವ ಮೂಲಕ ಆನೆಯನ್ನು ಕಾಡಿನತ್ತ ಅಟ್ಟಲು ಕ್ರಮ ಕೈಗೊಂಡಿದ್ದಾರೆ.

ಈ ಘಟನೆಗೆ ಪೂರ್ವದಲ್ಲಿ ಆನೆಯು ಪರಿಸರದ ಜನನಿಬಿಡ ಪ್ರದೇಶಗಳಲ್ಲಿ ಓಡಾಟ ನಡೆಸಿದ್ದು ಒಬ್ಬರ ಮನೆಯಂಗಳಕ್ಕೂ ಹೋಗಿತ್ತು ಹಾಗೂ ರಸ್ತೆ ಬದಿ ಇರುವ ಮನೆಯೊಂದರ ಗೇಟನ್ನು ಮುರಿಯಲು ಯತ್ನಿಸಿತ್ತು. ಆಗ ಸುತ್ತಮುತ್ತಲ ಮನೆಯವರು ಬೊಬ್ಬೆ ಹೊಡೆದ ಕಾರಣ ಮತ್ತೆ ರಸ್ತೆಗೆ ಬಂದಿತ್ತು

ತಾಲೂಕಿನ ಹಲವು ಗ್ರಾಮಗಳಲ್ಲಿ ಕಾಡಾನೆಗಳಿಂದ ನಿರಂತರ ಕೃಷಿ ಹಾನಿ ಉಂಟಾಗುತ್ತಿದ್ದು, ಇದೇ ಮೊದಲ ಬಾರಿಗೆ ವಾಹನದ ಮೇಲೆ ದಾಳಿ ನಡೆದಿದೆ.

Leave a Reply

Your email address will not be published. Required fields are marked *

error: Content is protected !!