ಕಡೂರು: ತೆಂಗಿನಕಾಯಿ ಕೀಳುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಮೃತ್ಯು
ಕಡೂರು: ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ಅಲ್ಯೂಮಿನಿಯಂ ಏಣಿ ತಗುಲಿ ಯುವಕನೋರ್ವ ಮೃತಪಟ್ಟ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಪಟ್ಟಣಗೆರೆ ಗ್ರಾಮದಲ್ಲಿ ರವಿವಾರ ಸಂಜೆ ನಡೆದಿದ್ದು, ಈ ಬಗ್ಗೆ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತನನ್ನು ಅಭಿಷೇಕ್ (27) ಎಂದು ಗುರುತಿಸಲಾಗಿದೆ. ಅಭಿಷೇಕ್ ತನಗೆ ಸೇರಿದ್ದ ತೋಟದಲ್ಲಿ ರವಿವಾರ ಸಂಜೆ ತೆಂಗಿನಕಾಯಿ ಕೀಳಲು ಹೋಗಿದ್ದರು. ಅಲ್ಲೇ ಹಾದು ಹೋಗಿದ್ದ ವಿದ್ಯುತ್ ತಂತಿಗೆ ಏಣಿ ತಗುಲಿದೆ ಎನ್ನಲಾಗಿದೆ. ಇದರಿಂದ ವಿದ್ಯುತ್ ಆಘಾತಕ್ಕೆ ಒಳಗಾದ ಅಭಿಷೇಕ್ ಮೃತಪಟ್ಟಿದ್ದಾರೆ.