December 23, 2024

ಕೊಚ್ಚಿ: ವಿಶ್ವವಿದ್ಯಾಲಯದ ಸಂಗೀತ ಕಾರ್ಯಕ್ರಮದಲ್ಲಿ ಕಾಲ್ತುಳಿತ: ನಾಲ್ವರು ಮೃತ್ಯು, 55 ಅಧಿಕ ಮಂದಿ ಗಾಯ

0

ಕೊಚ್ಚಿ: ಕೊಚ್ಚಿಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದಲ್ಲಿ ಟೆಕ್ ಫೆಸ್ಟ್ ಅಂಗವಾಗಿ ನಡೆದ ಸಂಗೀತ ಕಾರ್ಯಕ್ರಮದ ವೇಳೆ ಕಾಲ್ತುಳಿತ ಸಂಭವಿಸಿ ನಾಲ್ವರು ಮೃತಪಟ್ಟಿದ್ದಾರೆ. ಇಬ್ಬರು ಹುಡುಗಿಯರು ಮತ್ತು ಇಬ್ಬರು ಹುಡುಗರು ಈ ಕಾಲ್ತುಳಿತದಲ್ಲಿ ಸಾವು ಕಂಡಿದ್ದಾರೆ.

ನೂಕು ನುಗ್ಗಲಿನಲ್ಲಿ 55 ಮಂದಿಗೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದೂ ವರದಿಯಾಗಿದೆ. ಮೃತರ ಹೆಸರು ಇನ್ನೂ ಲಭ್ಯವಾಗಿಲ್ಲ. ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ (ಕುಸಾಟ್‌) ಇಂಜಿನಿಯರಿಂಗ್ ಕಾಲೇಜಿನಲ್ಲಿ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮೂರು ದಿನಗಳ ಟೆಕ್ ಫೆಸ್ಟ್‌ನ ಅಂಗವಾಗಿ, ನಿಕಿತಾ ಗಾಂಧಿ ಅವರ ಸಂಗೀತ ಕಾರ್ಯಕ್ರಮವನ್ನು ಕೊನೆಯ ದಿನ ಏರ್ಪಡಿಸಲಾಗಿತ್ತು. ಈ ವೇಳೆ ಘಟನೆ ಸಂಭವಿಸಿದೆ.

ಗಾಯಕಿ ನಿಖಿತಾ ಗಾಂಧಿ ಕ್ಯಾಂಪಸ್‍ನಲ್ಲಿರುವ ಓಪನ್ ಏರ್ ಆಡಿಟೋರಿಯಂನಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಪಾಸ್ ಇಲ್ಲದವರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಹೀಗಾಗಿ ವಿದ್ಯಾರ್ಥಿಗಳು ಹೊರಗಡೆ ನಿಂತು ಕಾರ್ಯಕ್ರಮ ವೀಕ್ಷಿಸುತ್ತಿದ್ದರು. ಆಗ ಜೋರಾಗಿ ಮಳೆಯಾಗಿದೆ. ಈ ವೇಳೆ ಓಡಿ ಆಡಿಟೋರಿಯಂಗೆ ನುಗ್ಗಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿದೆ. ಪರಿಣಾಮ ನಾಲ್ವರು ಸಾವನ್ನಪ್ಪಿ, 55ಕ್ಕೂ ಅಧಿಕ ಜನರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

 

 

ಇಂದು ಟೆಕ್ ಫೆಸ್ಟ್‌ನ ಮುಕ್ತಾಯದ ದಿನವಾಗಿತ್ತು. ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸುವ ಮೂಲಕ ಕಾರ್ಯಕ್ರಮವನ್ನು ಆನಂದಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಗಾಯಗೊಂಡವರೆಲ್ಲರೂ ವಿದ್ಯಾರ್ಥಿಗಳು ಎಂದು ಶಂಕಿಸಲಾಗಿದೆ.

ವೈದ್ಯರು ಸೇರಿದಂತೆ ಆರೋಗ್ಯ ಕಾರ್ಯಕರ್ತರು ಕಲಮಸೇರಿ ವೈದ್ಯಕೀಯ ಕಾಲೇಜು ಮತ್ತು ಎರ್ನಾಕುಲಂ ಜನರಲ್ ಆಸ್ಪತ್ರೆಗೆ ತಲುಪಿದ್ದಾರೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದಾರೆ. ಮುಂದಿನ ವ್ಯವಸ್ಥೆ ಮಾಡುವಂತೆ ಆರೋಗ್ಯ ಇಲಾಖೆ ನಿರ್ದೇಶಕರು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.

Leave a Reply

Your email address will not be published. Required fields are marked *

error: Content is protected !!