ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಕೊಲೆಗಾರರಿಗೆ ಜೀವಾವಧಿ ಶಿಕ್ಷೆ
ಹೊಸದಿಲ್ಲಿ: ಇಂಗ್ಲಿಷ್ ವಾಹಿನಿಯೊಂದರ ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಅವರ ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳ ಆರೋಪ ಸಾಬೀತಾಗಿದ್ದು ದೆಹಲಿ ನ್ಯಾಯಾಲಯ ಇಂದು ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿದೆ.
2008 ರಲ್ಲಿ ಈ ಘಟನೆ ನಡೆದಿತ್ತು.
ಸೌಮ್ಯಾ ವಿಶ್ವನಾಥನ್ ಅವರು ಸೆ 30, 2008 ರ ಬೆಳಗ್ಗೆ ದಕ್ಷಿಣ ದೆಹಲಿಯ ನೆಲ್ಸನ್ ಮಂಡೇಲಾ ಮಾರ್ಗದಲ್ಲಿ ಕೆಲಸದಿಂದ ಮನೆಗೆ ಮರಳುತ್ತಿದ್ದಾಗ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಈ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ರವಿ ಕಪೂರ್, ಅಮಿತ್ ಶುಕ್ಲಾ, ಬಲ್ಜೀತ್ ಮಲಿಕ್ ಮತ್ತು ಅಜಯ್ ಕುಮಾರ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಐದನೇ ಅಪರಾಧಿಯಾಗಿರುವ ಅಜಯ್ ಸೇಥಿ ಎಂಬಾತನಿಗೆ ಮೂರು ವರ್ಷಗಳ ಸರಳ ಜೈಲು ಶಿಕ್ಷೆ ವಿಧಿಸಲಾಗಿದೆ.ದರೋಡೆಯೇ ಅಪರಾಧಿಗಳ ಉದ್ದೇಶವಾಗಿತ್ತು ಎಂದು ಪೊಲೀಸರು ಸಮರ್ಥಿಸಿಕೊಂಡಿದ್ದಾರೆ.
ಅಕ್ಟೋಬರ್ 18 ರಂದು, ಭಾರತೀಯ ದಂಡ ಸಂಹಿತೆ ಸೆಕ್ಷನ್ 302 ಮತ್ತು ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ ನಿಬಂಧನೆಗಳ ಅಡಿಯಲ್ಲಿ ರವಿ ಕಪೂರ್, ಅಮಿತ್ ಶುಕ್ಲಾ, ಬಲ್ಜೀತ್ ಮಲಿಕ್ ಮತ್ತು ಅಜಯ್ ಕುಮಾರ್ ಅವರನ್ನು ನ್ಯಾಯಾಲಯವು ಯಾವುದೇ ವ್ಯಕ್ತಿಯ ಸಾವಿಗೆ ಕಾರಣವಾಗುವ ಸಂಘಟಿತ ಅಪರಾಧವನ್ನು ಎಸಗಲು ಅಪರಾಧಿಗಳೆಂದು ಘೋಷಿಸಿತ್ತು.
ಶಿಕ್ಷೆಯ ಪ್ರಮಾಣವನ್ನು ಆದೇಶಿಸಿದ ನ್ಯಾಯಾಲಯ, ಅಪರಾಧವು ಅಪರೂಪದ ಅಪರೂಪದ ಪ್ರಕರಣಗಳ ವರ್ಗಕ್ಕೆ ಬರುವುದಿಲ್ಲ ಎಂದು ಹೇಳಿ ಮರಣದಂಡನೆಗೆ ಕೋರಿಕೆಯನ್ನು ತಿರಸ್ಕರಿಸಲಾಗಿದೆ ಎಂದು ಹೇಳಿದೆ.