ಪುತ್ತೂರು: ಅಮಲು ಬರಿಸುವ ಪಾನೀಯ ಕುಡಿಸಿ ಮಹಿಳೆಯ ಅತ್ಯಾಚಾರ
ಪುತ್ತೂರು: ಮಹಿಳೆಯೋರ್ವಳಿಗೆ ಅಮಲು ಬರಿಸುವ ಪಾನೀಯ ಕುಡಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿ ರಸ್ತೆಯ ಬಳಿ ಬಿಟ್ಟು ಹೋದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಾಲ್ಮರ ಎಂಬಲ್ಲಿ ನ.24ರ ರಾತ್ರಿ ಅಂದರೆ ನಿನ್ನೆ ನಡೆದಿದೆ.
ಇಂದು ಬೆಳಗ್ಗೆ ಮಹಿಳೆಯನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮಹಿಳೆಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಆಕೆ ಚೇತರಿಸುತ್ತಿದ್ದಾರೆ.
ದೌರ್ಜನ್ಯಕ್ಕೆ ಒಳಗಾದ ಮಹಿಳೆ ಚೆನ್ನರಾಯಪಟ್ಟಣ ಮೂಲದವರು ಎಂದು ತಿಳಿದು ಬಂದಿದೆ. ನಿನ್ನೆ ರಾತ್ರಿ ಪುತ್ತೂರು ಬಸ್ ನಿಲ್ದಾಣದ ಬಳಿ ಇದ್ದ ಈ ಮಹಿಳೆಗೆ ಆರೋಪಿ ಅಮಲು ಬರಿಸುವ ಪಾನೀಯ ನೀಡಿ ಕರೆದೊಯ್ದು ಅತ್ಯಾಚಾರ ಎಸಗಿದ್ದನು. ಬಳಿಕ ತನ್ನ ಸಹಚರರನ್ನು ಕೂಡಾ ಫೋನ್ ಮಾಡಿ ಕರೆಸಿಕೊಳ್ಳಲು ಆರೋಪಿ ಯತ್ನಿಸಿದ್ದನು.
ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಮಹಿಳೆಗೆ ಈ ವಿಚಾರ ತಿಳಿದು ಆಕೆ ಆರೋಪಿಯ ಹಿಡಿತದಿಂದ ತಪ್ಪಿಸಿಕೊಂಡಿದ್ದಳು.
ಇಂದು ಬೆಳಗ್ಗೆ ಈ ಮಹಿಳೆ ಪ್ರಜ್ಞೆ ತಪ್ಪಿ ರಸ್ತೆಯ ಬಳಿ ಬಿದ್ದಿರುವುದು ಸಾರ್ವಜನಿಕರ ಗಮನಕ್ಕೆ ಬಂದಿದೆ. ಇದೀಗ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುತ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.